Mysore
21
overcast clouds

Social Media

ಮಂಗಳವಾರ, 22 ಅಕ್ಟೋಬರ್ 2024
Light
Dark

IPL 2024| ಫಿಲಿಪ್‌ ಸಾಲ್ಟ್‌ ಅರ್ಧಶತಕದಾಟ; ಡಿಸಿ ವಿರುದ್ಧ ಕೆಕೆಆರ್‌ಗೆ ನಿರಾಯಾಸ ಗೆಲುವು!

ಕೊಲ್ಕತ್ತಾ: ಫಿಲಿಪ್‌ ಸಾಲ್ಟ್‌ ಅವರ ಆಕರ್ಷಕ ಅರ್ಧಶತಕದಾಟ ಹಾಗೂ ವರುಣ್‌ ಚಕ್ರವರ್ತಿ ಅವರ ಅಮೋಘ ಬೌಲಿಂಗ್‌ ದಾಳಿಯಿಂದ ಕೊಲ್ಕತ್ತಾ ನೈಟ್‌ರೈಡರ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ 7 ವಿಕೆಟ್‌ಗಳ ಅಂತರದ ರೋಚಕ ಗೆಲುವು ದಾಖಲಿಸಿದೆ.

ಇಲ್ಲಿನ ಕ್ರಿಕೆಟ್‌ ಕಾಶಿ ಈಡೆನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಐಪಿಎಲ್‌ ಸೀಸನ್‌ 17ರ 47 ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಎದುರಾಗಿದ್ದವು. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಬ್ಯಾಟಿಂಗ್‌ ಆಯ್ದುಕೊಂಡಿತು. ಈ ಪ್ರಕಾರ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 153 ಮೊತ್ತ ಗಳಿಸಿ, ಎದುರಾಳಿ ತಂಡಕ್ಕೆ 154 ರನ್‌ಗಳ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಕೆಕೆಆರ್‌ 16.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 157 ರನ್‌ ಗಳಿಸಿ ಗೆದ್ದು ಬೀಗಿತು.

ಡೆಲ್ಲಿ ಇನ್ನಿಂಗ್ಸ್‌: ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿಗೆ ಆರಂಭಿಕ ಬ್ಯಾಟರ್‌ಗಳಿಬ್ಬರು ಕೈಕೊಟ್ಟರು. ಪೃಥ್ವಿ ಶಾ 13(7) ಹಾಗೂ ಮೆಕ್‌-ಗರ್ಕ್‌ 12(7) ಉತ್ತಮ ಜತೆಯಾಟ ನೀಡುವಲ್ಲಿ ವಿಫಲರಾದರು. ಪೋರೆಲ್‌ 18(15) ಗಳಿಸಿ ಔಟಾದರು.

ಡೆಲ್ಲಿ ತಂಡಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಶಾಯ್‌ ಹೋಪ್‌ 6(3)ರನ್‌ ಗಳಿಸಿ ಬಂದ ವೇಗದಲ್ಲೇ ಹಿಂತಿರುಗಿದರು. ಉಳಿದಂತೆ ನಾಯಕ ರಿಷಭ್‌ ಪಂತ್‌ 27(20), ಅಕ್ಷರ್‌ ಪಟೇಲ್‌ 15(21), ಸ್ಟಬ್ಸ್‌ 4(7), ಕುಶಾಗ್ರ 1(3), ರಸಿಕ್‌ 8(10) ರನ್‌ ಗಳಿಸಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆದರೆ, ಕೊನೆಯಲ್ಲಿ ಭರ್ಜರಿಯಾಗಿ ಬ್ಯಾಟ್‌ ಬೀಸಿದ ಬೌಲರ್‌ ಕುಲ್ದೀಪ್‌ ಯಾದವ್‌ ಔಟಾಗದೇ 35(26)ರನ್‌ ಬಾರಿಸಿದರು. (ಈ ಇನ್ನಿಂಗ್ಸ್‌ನಲ್ಲಿ ಬಂದ ಗರಿಷ್ಠ ರನ್‌ ಇದಾಗಿತ್ತು.) ವಿಲಿಯಮ್ಸ್‌ ಔಟಾಗದೇ 1(2) ರನ್‌ ಬಾರಿಸಿ ತಂಡದ ಮೊತ್ತ 150ರ ಗಡಿ ದಾಟಲು ಸಹಕರಿಸಿದರು.

ಕೆಕೆಆರ್‌ ಪರ ವರುಣ್‌ ಚಕ್ರವರ್ತಿ 3, ಅರೋರಾ ಮತ್ತು ಹರ್ಷಿತ್‌ ರಾಣಾ ತಲಾ ಎರಡೆರಡು ವಿಕೆಟ್‌, ನರೈನ್‌ ಹಾಗೂ ಸ್ಟಾರ್ಕ್‌ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಕೆಕೆಆರ್‌ ಇನ್ನಿಂಗ್ಸ್‌: ತವರಿನಂಗಳದಲ್ಲಿ ಡೆಲ್ಲಿ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕೆಕೆಆರ್‌ಗೆ ಫಿಲಿಪ್‌ ಸಾಲ್ಟ್‌ ಆಸರೆಯಾದರು. ಇವರು 33 ಎಸೆತ ಎದುರಿಸಿ 7 ಬೌಂಡರಿ ಹಾಗೂ 5 ಸಿಕ್ಸರ್‌ ಸಹಿತ 68 ರನ್‌ ಚಚ್ಚಿದರು. ನರೈನ್‌ 15(10), ರಿಂಕು ಸಿಂಗ್‌ 11(11) ರನ್‌ ಗಳಿಸಿ ನಿರ್ಗಮಿಸಿದರು. ಬಳಿಕ ಒಂದಾದ ಅಯ್ಯರ್‌ ಜೋಡಿ ವಿಕೆಟ್‌ ನೀಡದೇ ತಂಡವನ್ನು ಗೆಲುವಿನ ದಡ ಸೇರಿಸಲು ಯಶಸ್ವಿಯಾದರು. ಕೊನೆಯಲ್ಲಿ ಔಟಾಗದೇ ಬ್ಯಾಟಿಂಗ್‌ ಮಾಡಿದ ಶ್ರೇಯಸ್‌ ಅಯ್ಯರ್‌ 33(23) ಹಾಗೂ ವೆಂಕಟೇಶ್‌ ಅಯ್ಯರ್‌ 26(23) ರನ್‌ ಬಾರಿಸಿ ತಂಡಕ್ಕೆ ಗೆಲುವು ತಂದಿಟ್ಟರು.

ಡೆಲ್ಲಿ ಪರ ಅಕ್ಷರ್‌ ಪಟೇಲ್‌ ಎರಡು ಹಾಗೂ ವಿಲಿಮಯ್ಸ್‌ ಒಂದು ವಿಕೆಟ್‌ ಪಡೆದರು.

Tags: