ಚೆನ್ನೈ: ನಾಯಕ ಋತುರಾಜ್ ಗಾಯಕ್ವಾಡ್ ಅವರ ಅರ್ಧಶತಕ, ಜಡೇಜಾ ಮತ್ತು ದೇಶ್‌ಪಾಂಡೆ ಬೌಲಿಂಗ್ ದಾಳಿಗೆ ತಬ್ಬಿಬ್ಬಾದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸಿಎಸ್‌ಕೆ ವಿರುದ್ಧ ಹೀನಾಯ ಸೋಲು ಕಂಡಿದೆ.
ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತ ನೈಟ್ ರೈಡರ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 137 ರನ್ ಗಳಿಸಿತು. ಈ ಮೊತ್ತ ಬೆನ್ನತ್ತಿದ ಸಿಎಸ್‌ಕೆ 17.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 141 ರನ್‌ಗಳಿಸಿ 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತು.
ಕೆಕೆಆರ್ ಇನ್ನಿಂಗ್ಸ್: ಇತ್ತ ಮೊದಲು ಬ್ಯಾಟ್ ಮಾಡಿದ ಕೆಕೆಆರ್‌ಗೆ ಇನ್ನಿಂಗ್ಸ್ ಆರಂಭದ ಮೊದಲ ಬಾಲ್‌ನಲ್ಲೇ ಆಘಾತ ಎದುರಾಯಿತು. ಫಿಲ್ ಸಾಲ್ಟ್ 0(1) ನಿರ್ಗಮಿಸಿದರು. ನಂತರ ಸುನಿಲ್ ನರೈನ್ 27(20), ಅಂಗ್ರ್ಕಿಶ್ ರಘುವಂಶಿ 24(18) ತಂಡಕ್ಕೆ ಚೇತರಿಕೆ ಆಟವಾಡಿದರು. ನಾಯಕ ಶ್ರೇಯಸ್ ಅಯ್ಯರ್ 34(32) ರನ್ ಗಳಿಸಿದ್ದೇ ತಂಡದ ಪರ ಗರಿಷ್ಠ. ಉಳಿದಂತೆ ವೆಂಕಟೇಶ್ ಅಯ್ಯರ್ 3(8), ರಮಣದೀಪ್ ಸಿಂಗ್ 13(12) , ರಿಂಕು ಸಿಂಗ್ 9(14), ಆಂಡ್ರೆ ರಸೆಲ್ 10(10) , ಅನುಕೂಲ್ ರಾಯ್ 3(3), ಮಿಚೆಲ್ ಸ್ಟಾರ್ಕ್ 0(3), ವೈಭವ್ ಅರೋರಾ 1(1) ರನ್ ಗಳಿಸಿದರು. ಕೆಕೆಆರ್‌ಗೆ ಮಧ್ಯಮ ಕ್ರಮಾಂಕ ಕೈ ಹಿಡಿಯುವಲ್ಲಿ ವಿಫಲವಾಗಿ ತಂಡ ಸಾಧಾರಣ ಮೊತ್ತಕ್ಕೆ ಕುಸಿಯಿತು.
ಸಿಎಸ್‌ಕೆ ಪರ ತುಷಾರ್ ದೇಶಪಾಂಡೆ ಹಾಗೂ ರವೀಂದ್ರ ಜಡೇಜಾ 3, ಮುಸ್ತಫಿಜುರ್ ರೆಹಮಾನ್ 2 ಮತ್ತು ತೀಕ್ಷಣ 1 ವಿಕೆಟ್ ಪಡೆದು ಮಿಂಚಿದರು.
ಸಿಎಸ್‌ಕೆ ಇನ್ನಿಂಗ್ಸ್: ಸಿಎಸ್‌ಕೆ ಪರ ನಾಯಕ ಋತುರಾಜ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಋತುರಾಜ್ ಔಟಾಗದೇ 58 ಎಸೆತಗಳಲ್ಲಿ 9 ಬೌಂಡರಿ ಸಹಿತ 67 ರನ್ ಕಲೆಹಾಕಿ ಕೊನೆವರೆಗು ನಿಂತು ಪಂದ್ಯ ಮುಗಿಸಿದರು. ಉಳಿದಂತೆ ರಚಿನ್ ರವೀಂದ್ರ 15(8), ಡೇರಿಯಲ್ ಮಿಚೆಲ್ 25(19), ಶಿವಂ ದುಬೆ 28(18) ಮತ್ತು ಎಂ.ಎಸ್ ಧೋನಿ 1(3) ರನ್ ಗಳಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.
ಕೆಕೆಆರ್ ಪರ ಅರೋರ 2, ಸುನೀಲ್ ನರೈನ್ ಒಂದು ವಿಕೆಟ್ ಕಿತ್ತರು