ಚೆನ್ನೈ: ಇಲ್ಲಿನ ಎಂಎ ಚಿದಂಬಂರಂ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಶುಭಾರಂಭ ಮಾಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 174 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 18.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 21 (20) ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ 35 (23) ರನ್ ಗಳಿಸಿದರು. ಭಾರೀ ನಿರೀಕ್ಷೆ ಹುಟ್ಟಿಸಿದ್ದ ರಜತ್ ಪಾಟಿದಾರ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಇಬ್ಬರೂ ಸಹ ಡಕ್‌ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಕಣಕ್ಕಿಳಿದ ಕ್ಯಾಮೆರಾನ್ ಗ್ರೀನ್ 18 (22) ರನ್ ಕಲೆಹಾಕಿದರು. ಹೀಗೆ 11.4 ಓವರ್‌ಗಳಲ್ಲಿ ಕೇವಲ 78 ರನ್‌ಗಳಿಗೆ ತನ್ನ 5 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿಗೆ ಆರನೇ ವಿಕೆಟ್‌ಗೆ ಜತೆಯಾದ ಅನುಜ್ ರಾವತ್ ಹಾಗೂ ದಿನೇಶ್ ಕಾರ್ತಿಕ್ ಕೊನೆಯ 50 ಎಸೆತಗಳಲ್ಲಿ 95 ರನ್‌ಗಳ ಜತೆಯಾಟವಾಡುವುದರ ಮೂಲಕ ಆಸರೆಯಾದರು. ಅನುಜ್ ರಾವತ್ 25 ಎಸೆತಗಳಲ್ಲಿ 48 ರನ್ ಕಲೆಹಾಕಿ ಕೊನೆಯ ಎಸೆತದಲ್ಲಿ ರನ್‌ಔಟ್ ಆದರೆ, ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಮುಸ್ತಫಿಜರ್ ರಹಮಾನ್ 4 ವಿಕೆಟ್ ಪಡೆದರೆ, ದೀಪಕ್ ಚಹರ್ ಒಂದು ವಿಕೆಟ್ ಪಡೆದರು.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ರಚಿನ್ ರವೀಂದ್ರ ಕಣಕ್ಕಿಳಿದರು. ಗಾಯಕ್ವಾಡ್ 15 (15) ರನ್ ಗಳಿಸಿದರೆ, ರಚಿನ್ ರವೀಂದ್ರ 15 ಎಸೆತಗಳಲ್ಲಿ 37 ರನ್ ಬಾರಿಸಿ ಉತ್ತಮ ಆರಂಭ ನೀಡಿದರು. ಇನ್ನುಳಿದಂತೆ ಅಜಿಂಕ್ಯಾ ರಹಾನೆ 27 (19), ಡೆರಿಲ್ ಮಿಚೆಲ್ 22 (18), ಶಿವಮ್ ದುಬೆ ಅಜೇಯ 34 (27) ಮತ್ತು ರವೀಂದ್ರ ಜಡೇಜಾ ಅಜೇಯ 25 (17) ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕ್ಯಾಮೆರಾನ್ ಗ್ರೀನ್ 2 ವಿಕೆಟ್, ಯಶ್ ದಯಾಳ್ ಹಾಗೂ ಕರ್ಣ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.





