ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾ ಪರವಾಗಿ ಸಾರ್ವಕಾಲಿಕ ಏಕದಿನ ತಂಡವನ್ನು ಪ್ರಕಟಿಸಿದ್ದಾರೆ.
ಸ್ಪೋರ್ಟ್ಸ್ ವೆಬ್‌ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ತಂಡವನ್ನು ಪ್ರಕಟಿಸಿದ್ದು, ಅಚ್ಚರಿಯಂಬಂತೆ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಉಲ್ಲೇಖಿಸಿದ್ದಾರೆ. ಆದರೆ ಭಾರತೀಯ ಕ್ರಿಕೆಟ್‌ಗಾಗಿ ದುಡಿದ ಹಲವು ಲೆಜೆಂಡ್ ಆಟಗಾರರನ್ನೇ ಗೌತಿ ಕೈ ಬಿಟ್ಟಿದ್ದಾರೆ.
ಪ್ರಸಕ್ತ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಕೋಕ್ ಕೊಟ್ಟಿರುವ ಗೌತಮ್, ತಂಡ ಪರವಾಗಿ ಆರಂಭಿಕರಾಗಿ ತಮ್ಮ ಹೆಸರಿನ ಜೊತೆಗೆ ವಿರೇಂದ್ರ ಸೆಹ್ವಾಗ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ರಾಹುಲ್ ದ್ರಾವಿಡ್ ಹೆಸರಿಸಿದರೆ ನಾಲ್ಕು ಮತ್ತು ಐದನೇ ಕ್ರಮಾಂಕದಲ್ಲಿ ದಿಗ್ಗಜ ಸಚಿನ್ ತೆಂಡುಲ್ಕರ್ ಹಾಗೂ ರನ್ ಮಷಿನ್ ವಿರಾಟ್ ಕೊಹ್ಲಿ ಹೆಸರಿದೆ. ಆರನೇ ಸ್ಥಾನದಲ್ಲಿ ಆಲ್‌ರೌಂಡರ್ ಯುವರಾಜ್ ಸಿಂಗ್, ಏಳನೇ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ, ಉಳಿದಂತೆ ಬೌಲರ್‌ಗಳಾದ ಅನಿಲ್ ಕುಂಬ್ಳೆ, ಆರ್. ಅಶ್ವಿನ್, ಇರ್ಫಾನ್ ಪಠಾಣ್ ಹಾಗೂ ಜಹೀರ್ ಖಾನ್ ಅವರು ಗೌತಿ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಉಳಿದಂತೆ ಟೀಂ ಇಂಡಿಯಾಗೆ ಮೊದಲು ವಿಶ್ವಕಪ್ ಗೆದ್ದುಕೊಟ್ಟ ಕಪಿಲ್ ದೇವ್, ಮಾಜಿ ನಾಯಕ ಸೌರವ್ ಗಂಗೂಲಿ, ಜಸ್‌ಪ್ರಿತ್ ಬುಮ್ರಾ, ರವೀಂದ್ರ ಜಡೇಜಾ, ಜವಾಗಲ್ ಶ್ರೀನಾಥ್ ಹಾಗೂ ಹರ್ಭಜನ್ ಸಿಂಗ್‌ರಂತಹ ಆಟಗಾರರನ್ನು ಕೈಬಿಟ್ಟಿದ್ದಾರೆ.
ಗಂಭೀರ್ ತಂಡ ಇಂತಿದೆ: ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಅನಿಲ್ ಕುಂಬ್ಳೆ, ಆರ್. ಅಶ್ವಿನ್, ಇರ್ಫಾನ್ ಪಠಾಣ್ ಮತ್ತು ಜಹೀರ್ ಖಾನ್.
ಇದೇ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶದ ವಿರುದ್ಧ ಭಾರತ ತಂಡ ತನ್ನ ತವರಿನಲ್ಲಿ ಟೆಸ್ಟ್ ಸರಣಿ ಆಡಲಿದೆ.