ನವದೆಹಲಿ : ಇತ್ತೀಚಿಗೆ ಅಂತ್ಯಗೊಂಡಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 100ಕ್ಕೂ ಹೆಚ್ಚು ಪದಕ ಗೆದ್ದು ಹೊಸ ಇತಿಹಾಸ ಬರೆದಿತ್ತು. ಇದೀಗ ಚೀನಾದಲ್ಲಿ ನಡೆದ 4ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 100 ಪದಕಗಳ ಗೆದ್ದು ಇತಿಹಾಸ ಬರೆದಿದ್ದಾರೆ.
ಪುರುಷರ 400 ಮೀಟರ್ ಟಿ47 ಸ್ಪರ್ಧೆಯಲ್ಲಿ ದಿಲೀಪ್ ಮಹಾದು ಗವಿತ್ 49.48 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕ ಗೆದ್ದು, ಭಾರತದ 100ನೇ ಪದಕ ಸಾಧನೆಗೆ ಕಾರಣರಾದರು. ಭಾರತದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ 100 ಪದಕಗಳು! ಅಪೂರ್ವ ಆನಂದದ ಕ್ಷಣ. ಈ ಯಶಸ್ಸು ನಮ್ಮ ಅಥ್ಲೀಟ್‌ಗಳ ಸಂಪೂರ್ಣ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪದ ಫಲವಾಗಿದೆ. ನಮ್ಮ ಯುವಕರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಇವರು ನೆನಪಿಸುತ್ತಾರೆ ಎಂದಿದ್ದಾರೆ.
ಈ ಮೊದಲು 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 72 ಪದಕ ಗೆದ್ದು ಸಾಧನೆ ಮಾಡಿತ್ತು. ಇದು ಈವರೆಗಿನ ಅತೀ ಹೆಚ್ಚು ಪದಕ ಗೆದ್ದ ಸಂಖ್ಯೆಯಾಗಿತ್ತು. ಆದರೆ ಈಗ ಈ ಪಟ್ಟಿ 100ಕ್ಕೆ ಏರಿದೆ. ಪ್ರಸ್ತುತ ಭಾರತ 29 ಚಿನ್ನ, 31 ಬೆಳ್ಳಿ ಹಾಗೂ 51 ಕಂಚಿನ ಪದಕ ಸೇರಿ ಒಟ್ಟು 111 ಪದಕ ಗೆದ್ದು ಕೊಂಡಿದೆ. ಈ ಮೂಲಕ ಪದಕ ವಿಜೇತರ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಒಟ್ಟು 521 ಪದಕಗಳೊಂದಿಗೆ ಚೀನಾ ಮೊದಲ ಸ್ಥಾನದಲ್ಲಿದೆ.
https://x.com/narendramodi/status/1718103347364843860?s=20