ನವದೆಹಲಿ: ಕುಸ್ತಿಪಟುಗಳ ಹೋರಾಟಕ್ಕೆ ಗೃಹ ಸಚಿವರು ನ್ಯಾಯ ನೀಡುವ ಭರವಸೆ ನೀಡಿದ್ದರು. ಆದರೆ ಇದು ನಿರಾಸೆಯಾಗಿದ್ದು, ದೇಶ ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರಿದೆ.
ಡಬ್ಲ್ಯೂಎಫ್‌ಐ ಗೆ ಬ್ರಿಜ್ ಭೂಷಣ್ ಸಿಂಗ್ ಆಪ್ತ ಮುಖ್ಯಸ್ಥನಾಗಿ ನೇಮಕಗೊಂಡ ಬೆನ್ನಲ್ಲೇ ನೇಮಕ ವಿರೋಧಿಸಿ ಕುಸ್ತಿಪಟು ಸಾಕ್ಷಿ ಮಲ್ಲಿಕ್ ಕಣ್ಣೀರು ಸುರಿಸುತ್ತಾ ನಿವೃತ್ತಿ ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಮಹಿಳಾ ಕುಸ್ತಿಪಟುಗಳ ಮೇಲಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಗೃಹ ಸಚಿವರು ನ್ಯಾಯದ ಭರವಸೆ ನೀಡಿದ್ದರು, ಆದರೇ ಬಿಜೆಪಿ ಆರೋಪಿ ಸಂಸದರನ್ನು ರಕ್ಷಿಸುವುದನ್ನು ಮುಂದುವರೆಸಿದೆ. ನಮ್ಮ ಕುಸ್ತಿಪಟುಗಳ ಕಣ್ಣೀರಿಗೆ ಭಾರತ ತಕ್ಕ ಉತ್ತರ ನೀಡುತ್ತದೆ ಎಂದು ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ದೇಶದ ಪುತ್ರಿ ಸಾಕ್ಷಿ ಮಲಿಕ್ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಳು. ಸರ್ಕಾರದಲ್ಲಿರುವ ಎಲ್ಲ ಜನರನ್ನು ಭೇಟಿ ಮಾಡಿ, ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರಿಂದ ಲಾಠಿ ಏಟು ತಿಂದರು, ನ್ಯಾಯ ಸಿಗದೆ ಅವರು ನಿವೃತ್ತಿ ತೆಗೆದುಕೊಂಡಿದ್ದಾರೆ ಈ ಕಣ್ಣೀರು ಮೋದಿ ಸರ್ಕಾರದ ಕೊಡುಗೆಯಾಗಿದೆ ಎಂದು ವಿಷಾದಿಸಿದ್ದಾರೆ.
ಸಾಕ್ಷಿ ಮಲ್ಲಿಕ್ ಇಂದು “ನಾನು ಸೋತಿದ್ದೇನೆ” ಎಂದು ಹೇಳುತ್ತಿರುವುದು ದುರದೃಷ್ಟಕರ” ಎಂದು ಮಲಿಕ್ ಅಳುವ ವೀಡಿಯೊವನ್ನು ಕಾಂಗ್ರೆಸ್ ಶೇರ್ ಮಾಡಿದೆ.
ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರು ಗುರುವಾರ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, WFI ಮಾಜಿ ಮುಖ್ಯಸ್ಥನಿಂದ “ಕಿರುಕುಳ” ಅನುಭವಿಸಿದ ಸಹ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯಕ್ಕಾಗಿ ನಡೆದ ಹೋರಾಟದಲ್ಲಿ ತಾನು ಸೋತಿದ್ದೇನೆ ಎಂದು ಹೇಳಿ ಸಾಕ್ಷಿ ಮಲಿಕ್ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು.





