ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಏಕದಿನ ಸರಣಿಯನ್ನು ಗೆದ್ದಿರುವ ಭಾರತ ಕ್ರಿಕೆಟ್ ತಂಡ ಸದ್ಯ ಮೊದಲ ಟೆಸ್ಟ್ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿದೆ. ನಿನ್ನೆಯಿಂದ ( ಡಿಸೆಂಬರ್ 26 ) ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಎರಡನೇ ದಿನದಾಟದಂತ್ಯಕ್ಕೆ 66 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 256 ರನ್ ಗಳಿಸುವ ಮೂಲಕ 11 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.
ದಕ್ಷಿಣ ಆಫ್ರಿಕಾದ ಪರ ಡೀನ್ ಎಲ್ಗರ್ ಶತಕ ಬಾರಿಸಿ ( 140 ) ಅಜೇಯರಾಗಿ ಉಳಿದುಕೊಂಡಿದ್ದರೆ, ಡೇವಿಡ್ ಬೆಡಿಂಗ್‌ಹ್ಯಾಮ್ 56 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದ್ದಾರೆ. ಇನ್ನುಳಿದಂತೆ ಯಾವುದೇ ಬ್ಯಾಟ್ಸ್‌ಮನ್ ಸಹ ನಿರೀಕ್ಷಿಸಿದ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿಲ್ಲ. ಏಡನ್ ಮಾರ್ಕ್ರಮ್ 5 ರನ್, ಟೋನಿ ಡಿ ಝೋರ್ಝಿ 28, ಕೀಗನ್ ಪೀಟರ್ಸನ್ 2, ಕೈಲ್ ವೆರೆಯ್ನ್ 4 ಹಾಗೂ ಮಾರ್ಕೊ ಯಾನ್‌ಸೆನ್ ಅಜೇಯ 3 ರನ್ ಬಾರಿಸಿದರು.
ಭಾರತದ ಪರ ಮೊಹಮ್ಮದ್ ಸಿರಾಜ್ ಹಾಗೂ ಜಸ್‌ಪ್ರೀತ್ ಬುಮ್ರಾ ತಲಾ 2 ವಿಕೆಟ್ ಮತ್ತು ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆದರು.





