ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಏಕದಿನ ಸರಣಿಯನ್ನು ಗೆದ್ದಿರುವ ಭಾರತ ಕ್ರಿಕೆಟ್ ತಂಡ ಸದ್ಯ ಮೊದಲ ಟೆಸ್ಟ್ ಪಂದ್ಯದಲ್ಲಿ ಸೆಣಸಾಟ ನಡೆಸುತ್ತಿದೆ. ನಿನ್ನೆಯಿಂದ ( ಡಿಸೆಂಬರ್ 26 ) ಸೆಂಚುರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಭಾರತ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲ್‌ಔಟ್ ಆಗಿದೆ.
ಮೊದಲ ದಿನದಾಟ ಸಂಪೂರ್ಣವಾಗಿ ಮುಗಿಯುವ ಮುನ್ನವೇ ಮಳೆ ಬಂದ ಕಾರಣ 59 ಓವರ್‌ಗಳು ಮಾತ್ರ ನಡೆದು 8 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿದ್ದ ಟೀಮ್ ಇಂಡಿಯಾ ಎರಡನೇ ದಿನದಾಟ ಆರಂಭವಾದ ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಆಲ್‌ಔಟ್ ಆಗಿದೆ.
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲಾ ಬ್ಯಾಟ್ಸ್‌ಮನ್‌ಗಳೂ ಕೈಕೊಟ್ಟಿದ್ದು ಕೆಎಲ್ ರಾಹುಲ್ ತಂಡಕ್ಕೆ ಆಪದ್ಬಾಂಧವನಾಗಿ ನಿಂತಿದ್ದಾರೆ. 137 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ 101 ರನ್ ಬಾರಿಸಿದರು.
ಭಾರತದ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಕಣಕ್ಕಿಳಿದರು. ಜೈಸ್ವಾಲ್ 17 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ ಕೇವಲ 5 ರನ್‌ಗಳಿಗೆ ಔಟ್ ಆದರು. ಇನ್ನುಳಿದಂತೆ ಶುಭ್‌ಮನ್ ಗಿಲ್ 2, ವಿರಾಟ್ ಕೊಹ್ಲಿ 38, ಶ್ರೇಯಸ್ ಅಯ್ಯರ್ 31, ರವಿಚಂದ್ರನ್ ಅಶ್ವಿನ್ 8, ಶಾರ್ದೂಲ್ ಠಾಕೂರ್ 24, ಜಸ್‌ಪ್ರೀತ್ ಬುಮ್ರಾ ಕೇವಲ 1 ರನ್, ಮೊಹಮ್ಮದ್ ಸಿರಾಜ್ 5 ಹಾಗೂ ಪ್ರಸಿದ್ಧ್ ಕೃಷ್ಣ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಸೌತ್ ಆಫ್ರಿಕಾ ಪರ ಕಗಿಸೊ ರಬಾಡಾ 5 ವಿಕೆಟ್ ಪಡೆದು ಮಿಂಚಿದರೆ, ನಾಂದ್ರೆ ಬರ್ಗರ್ 3, ಗೆರಾಲ್ಡ್ ಕೊಯೆಟ್ಜಿ ಹಾಗೂ ಮಾರ್ಕೊ ಯಾನ್‌ಸೆನ್ ತಲಾ ಒಂದೊಂದು ವಿಕೆಟ್ ಪಡೆದರು.