ಕಳೆದ ಅಕ್ಟೋಬರ್ 5ರಂದು ಆರಂಭವಾದ ಪ್ರತಿಷ್ಟಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯದ ಸನಿಹಕ್ಕೆ ಬಂದಿದೆ. ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದ ಈ ಟೂರ್ನಿ ಈ ಬಾರಿ ಭಾರತ ನೆಲದಲ್ಲಿ ಜರುಗುತ್ತಿದೆ. ಈ ಪೈಕಿ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ನಾಕ್‌ಔಟ್ ಸುತ್ತಿಗೆ ಲಗ್ಗೆ ಇಡುವಲ್ಲಿ ಯಶಸ್ವಿಯಾಗಿದ್ದು, ಉಳಿದ ಆರು ತಂಡಗಳು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿವೆ.
ಇನ್ನು ಒಂದನೇ ಸೆಮಿ ಫೈನಲ್ ಪಂದ್ಯ ನವೆಂಬರ್ 15ರಂದು ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಲಿದ್ದು, ಟೂರ್ನಿಯಲ್ಲಿ ಸೋಲಿಲ್ಲದ ಸರದಾರರಾಗಿರುವ ಟೀಮ್ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿದ್ದು, ನವೆಂಬರ್ 16ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.
ಈ ಎರಡು ಪಂದ್ಯಗಳಲ್ಲಿ ಗೆಲ್ಲಲಿರುವ ತಂಡಗಳು ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದು, ನವೆಂಬರ್ 19ರ ಭಾನುವಾರದಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿವೆ.
ಇನ್ನು ಟೂರ್ನಿಯಲ್ಲಿ ಆಡಿದ ಎಲ್ಲಾ ಲೀಗ್ ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡದ ವಿರುದ್ಧ ಗೆದ್ದು ಕಳೆದ ವಿಶ್ವಕಪ್‌ನ ಸೆಮಿಫೈನಲ್ ಸೋಲಿನ ಸೇಡನ್ನು ತೀರಿಸಿಕೊಳ್ಳಲಿದೆಯಾ ಎಂಬ ಕುತೂಹಲ ಮೂಡಿದ್ದು, ಸದ್ಯ ಎಲ್ಲೆಡೆ ಪಂದ್ಯದ ಕುರಿತ ಚರ್ಚೆಗಳು ಜೋರಾಗಿವೆ. ಈ ಪಂದ್ಯಕ್ಕೆ ಆನ್‌ಫೀಲ್ಡ್ ಹಾಗೂ ಥರ್ಡ್ ಅಂಪೈರಿಂಗ್ ಯಾರು ಮಾಡಲಿದ್ದಾರೆ ಎಂಬ ಮಾಹಿತಿಯೂ ಸಹ ಹೊರಬಿದ್ದಿದೆ. ಆನ್‌ಫೀಲ್ಡ್ ಅಂಪೈರ್‌ಗಳಾಗಿ ರಿಚರ್ಡ್ ಇಲ್ಲಿಂಗ್‌ವರ್ಥ್ ಹಾಗೂ ರಾಡ್ ಟಕ್ಕರ್ ಕಣಕ್ಕಿಳಿಯಲಿದ್ದರೆ, ಥರ್ಡ್ ಅಂಪೈರ್ ಆಗಿ ಜ್ಯೋಲ್ ವಿಲ್‌ಸನ್ ಜವಾಬ್ದಾರಿ ಹೊರಲಿದ್ದಾರೆ.





