ಬೆಂಗಳೂರು: ನಗರದಲ್ಲಿ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇಂದು ( ಅಕ್ಟೋಬರ್ 16 ) ಸಹ ವರುಣ ತನ್ನ ಆರ್ಭಟವನ್ನು ಮುಂದುವರಿಸಿದ್ದಾನೆ. ಪರಿಣಾಮ ಇಂದಿನಿಂದ ಆರಂಭವಾಗಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ರದ್ದಾಗಿದೆ.
ಹೌದು, ಬೆಳಗ್ಗೆಯಿಂದಲೇ ಸತತವಾಗಿ ಮಳೆಯಾಗುತ್ತಿದ್ದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಬೇಕಿದ್ದ ಪಂದ್ಯ ಟಾಸ್ ಸಹ ಆಗದೇ ರದ್ದಾಗಿರುವುದು ಪಂದ್ಯ ವೀಕ್ಷಿಸಲು ಮಳೆಯ ನಡುವೆಯೇ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಲ್ಲಿ ಬೇಸರವನ್ನುಂಟುಮಾಡಿದೆ.
ಸದ್ಯ ಮೊದಲ ದಿನದಾಟಕ್ಕೆ ಮಳೆರಾಯ ಅಡ್ಡಿಯನ್ನುಂಟುಮಾಡಿದ್ದು ಎರಡನೇ ದಿನವಾದರೂ ಪಂದ್ಯ ಆರಂಭವಾಗುತ್ತಾ ಎಂಬ ಪ್ರಶ್ನೆಯಲ್ಲಿದ್ದಾರೆ ಕ್ರಿಕೆಟ್ ಅಭಿಮಾನಿಗಳು.