ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗೆ (IOA) ಇದೇ ಮೊದಲ ಬಾರಿ ಮಹಿಳಾ ಅಧ್ಯಕ್ಷರಾಗಿ ಕ್ರೀಡಾ ದಿಗ್ಗಜೆ ಪಿಟಿ ಉಷಾ (PT Usha) ಆಯ್ಕೆಯಾಗಿದ್ದಾರೆ. ಈ ಮೂಲಕ ಉಷಾ ದೇಶದ ಕ್ರೀಡಾ ಆಡಳಿತದಲ್ಲಿ ಹೊಸ ಯುಗಕ್ಕೆ ನಾಂದಿಹಾಡಿದ್ದಾರೆ.
58 ವಯಸ್ಸಿನ ಪಿಟಿ ಉಷಾ ಐಒಎಗೆ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 95 ವರ್ಷಗಳ ಇತಿಹಾಸದಲ್ಲೇ ಈ ಸ್ಥಾನಕ್ಕೇರಿದ ಮೊದಲ ಒಲಂಪಿಯನ್ ಹಾಗೂ ಅಂತಾರಾಷ್ಟ್ರೀಯ ಪದಕ ವಿಜೇತೆಯಾಗಿದ್ದಾರೆ.
ಪಿಟಿ ಉಷಾಯ ಆಯ್ಕೆಯಿಂದ ಐಒಎಯಲ್ಲಿ ದೀರ್ಘಕಾಲದಿಂದಿದ್ದ ಬಿಕ್ಕಟ್ಟು ಅಂತ್ಯವಾಗಿದೆ. ಇದಕ್ಕೂ ಮೊದಲು ಈ ತಿಂಗಳ ಒಳಗಾಗಿ ಅಧ್ಯಕ್ಷರ ನೇಮಕವಾಗದೇ ಹೋದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನೇ ಅಮಾನತುಗೊಳಿಸುವ ಸಾಧ್ಯತೆಯಿತ್ತು.
ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ (NRAI) ಅಜಯ್ ಪಟೇಲ್ ಅವರು ಹಿರಿಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಲಿಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಮತ್ತು ರೋಯಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷೆ ರಾಜಲಕ್ಷ್ಮಿ ಸಿಂಗ್ ದೇವ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ (IWF) ಅಧ್ಯಕ್ಷ ಸಹದೇವ್ ಯಾದವ್ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಅಧ್ಯಕ್ಷ ಮತ್ತು ಮಾಜಿ ಗೋಪರ್ ಕಲ್ಯಾಣ್ ಚೌಬೆ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.





