ಬ್ರಿಸ್ಬೇನ್: ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ಗಬ್ಬಾದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಫಾಲೋಆನ್‌ನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕೆ.ಎಲ್.ರಾಹುಲ್(84), ರವೀಂದ್ರ ಜಡೇಜಾ (77), ಹಾಗೂ ಕೊನೆಯಲ್ಲಿ ಆಕಾಶ್ ದೀಪ್ (27) ಅವರ ಉತ್ತಮ ಆಟದ ಮೂಲಕ ಭಾರತ ಅಲ್ಪಮಟ್ಟಿಗೆ ಯಶಸ್ಸು ಸಾಧಿಸಿದೆ.
ಬ್ರಿಸ್ಬೇನ್‌ನಲ್ಲಿ ಸತತವಾಗಿ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದ್ದರಿಂದ ಭಾರತ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 74.5 ಓವರ್‌ಗಳಲ್ಲಿ 252 ರನ್‌ಗಳಿಸಿ ಕೊಂಚ ನಿರಾಳವಾಗಿದೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್ ಬಾರಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ತನ್ನ ಪಾಲಿನ ಇನ್ನಿಂಗ್ಸ್ ಶುರುಮಾಡಿದ ಭಾರತ ಆರಂಭಿಕ ಬ್ಯಾಟರ್‌ಗಳ ವೈಫಲ್ಯದಿಂದ ಫಾಲೋಆನ್ ಭೀತಿಗೆ ಸಿಲುಕಿತು.
ಫಾಲೋಆನ್‌ನಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ 245 ರನ್‌ಗಳ ಆವಶ್ಯಕತೆ ಇದ್ದಾಗ, ಜಸ್ಪ್ರೀತ್ ಬುಮ್ರ ಹಾಗೂ ಆಕಾಶ್ ದೀಪ್ 10ನೇ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ಆಡುವ ಮೂಲಕ ಫಾಲೋಆನ್ ಹೇರುವುದನ್ನು ತಪ್ಪಿಸಿದರು.
ನಂತರ ಮಂದ ಬೆಳಕಿನ ಕಾರಣ 4ನೇ ದಿನದಾಟವನ್ನು ಅಂತ್ಯಗೊಳಿಸಲಾಯಿತು. ಆ ವೇಳೆ ಆಕಾಶ್ ದೀಪ್ 27 ರನ್(2 ಬೌಂಡರಿ 1 ಸಿಕ್ಸರ್) ಹಾಗೂ ಬುಮ್ರಾ 10 ರನ್‌ಗಳಿಸಿದ್ದಾರೆ.
ಟೆಸ್ಟ್ ಪಂದ್ಯಕ್ಕೆ ಇನ್ನೊಂದು ದಿನ ಬಾಕಿಯಿದ್ದು, ಭಾರತ ಕನಿಷ್ಠ ಡ್ರಾಗೊಳಿಸಲು ಯತ್ನಿಸಬೇಕಾಗಿದೆ.





