ಪ್ಯಾರಿಸ್: ಭಾರತ ಹಾಕಿ ತಂಡ ವಿಶ್ವ ವಿಖ್ಯಾತ ಕ್ರೀಡಾಕೂಟ ಒಲಂಪಿಕ್ಸ್‌ನಲ್ಲಿ ಫೈನಲ್ಸ್ ತಲುಪುವ ಭಾರತದ ಕನಸು ನುಚ್ಚು ನೂರಾಗಿದೆ. ಜರ್ಮನ್ ವಿರುದ್ಧ ರೋಚಕ ಹಣಾಹಣೆಯಲ್ಲಿ ಸೋತ ಭಾರತ ತಂಡ ಚಿನ್ನ ಗೆಲ್ಲುವ ಕನಸು ಕನಸಾಗೇ ಉಳಿದಿದೆ. ಭಾರತ ತಂಡದ ವಿರುದ್ಧ ಗೆದ್ದ ಜರ್ಮನಿ ಫೈನಲ್ಸ್‌ಗೆ ಲಗ್ಗೆಯಿಟ್ಟಿದೆ.
ಇಂದು (ಮಂಗಳವಾರ) ನಡೆದ ಸೆಮಿ ಫೈನಲ್ಸ್ ಪಂದ್ಯದಲ್ಲಿ ಜರ್ಮನಿ ತಂಡವನ್ನು ದಿಟ್ಟ ತನದಿಂದ ಎದುರಿಸುವಲ್ಲಿ ವಿಫಲವಾದ ಭಾರತ ತಂಡ ಗೆಲ್ಲುವ ಅವಕಾಶ ಕೈಚೆಲ್ಲಿತು.
ಪಂದ್ಯ ಆರಂಭದ ವೇಳೆಯಲ್ಲಿ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ 7ನೇ ನಿಮಿಷದಲ್ಲೇ ಗೋಲು ಬಾರಿಸಿ ಮುನ್ನಡೆ ತಂದು ಕೊಟ್ಟರು. ಇತ್ತ ಎದುರಾಳಿ ಜರ್ಮನ್‌ಗೆ ಸಿಕ್ಕ ಎರಡು ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ಎರಡು ಗೋಲುಗಳನ್ನು ಗಳಿಸಿದರು. ಮೊದಲ ವಿರಾಮದ ಅಂತ್ಯಕ್ಕೆ ಜರ್ಮನಿ 2 ಹಾಗೂ ಭಾರತ 1 ಗೋಲು ಗಳಿಸಿ ಹಿನ್ನಡೆ ಅನುಭವಿಸತ್ತು.
ಮೊದಲಾರ್ಧದ ಬಳಿಕ ಪುಟಿದೆದ್ದ ಭಾರತ ತಂಡ ಎದುರಾಳಿಗೆ ತಕ್ಕ ಉತ್ತರ ನೀಡಿದರು. 36 ನೇ ನಿಮಿಷದಲ್ಲಿ ಗೋಲು ಬಾರಿಸಿದ ಸುಖ್‌ಜೀತ್ ಸಿಂಗ್ ತಂಡಕ್ಕೆ ಆಸರೆಯಾದರು.
ಉಳಿದ ಮೂವತ್ತು ನಿಮಿಷಗಳ ಕಾಲ ಒಂದೇ ಒಂದು ಗೋಲು ಗಳಿಸಲು ಇತ್ತಂಡಗಳು ಪರದಾಡಿದರು. ಜರ್ಮನ್‌ಗೆ ಎರಡು ಬಾರಿ ಅವಕಾಶ ಸಿಕ್ಕರೂ ಗೋಲು ಗಳಿಸುವಲ್ಲಿ ವಿಫಲರಾದರು. ಆದರೆ ಕೊನೆಯ 6 ನಿಮಿಷಗಳು ಬಾಕಿ ಇರುವಾಗ ಜರ್ಮನಿಯ ಮಾರ್ಕೊ 54ನೇ ನಿಮಿಷದಲ್ಲಿ ರೋಚಕ ಗೋಲು ಗಳಿಸಿ ಜರ್ಮನಿಗೆ ಮುನ್ನಡೆ ತಂದುಕೊಡುವ ಮೂಲಕ ಜರ್ಮನಿ ತಂಡ ಫೈನಲ್ಸ್ ತಲುಪಲು ಸಹಕರಿಸಿದರು.
ಕೊನೆವರೆಗೂ ರೋಚಕವಾಗಿ ಹೋರಾಟ ಮಾಡಿದ ಭಾರತ ತಂಡ ಫೈನಲ್ಸ್ ತಲುಪುವಲ್ಲಿ ವಿಫಲವಾಯಿತು.