ಭಾರತಕ್ಕೆ ಗೆಲ್ಲಲು 100 ರನ್, ಬಾಂಗ್ಲಾ ಗೆಲುವಿಗೆ 6 ವಿಕೆಟ್ ದೂರ
ಮೀರ್ ಪುರ್: ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಶೇರ್ ಎ ಬಾಂಗ್ಲಾ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ.
ಮೂರನೇ ದಿನ ದ್ವಿತೀಯ ಇನ್ನಿಂಗ್ಸ್ ನಲ್ಲಿ 45 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿರುವ ಭಾರತ ಒತ್ತಡದಲ್ಲಿ ಸಿಲುಕಿದೆ. ಗೆಲ್ಲಲು ಉಳಿದ 6 ವಿಕೆಟ್ ಗೆ 100 ರನ್ ಗಳಿಸಬೇಕಾಗಿದ್ದು ಪಂದ್ಯ ಸಮಸ್ಥಿತಿಯಲ್ಲಿದೆ.
ಮೊದಲ ಇನ್ನಿಂಗ್ಸ್ ನಲ್ಲಿ 314 ರನ್ ಗಳಿಗೆ ಔಟಾಗಿದ್ದ ಭಾರತ 87 ರನ್ ಗಳ ಮುನ್ನಡೆಯೊಂದಿಗೆ ವಿಶ್ವಾಸದಲ್ಲಿತ್ತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ 231 ರನ್ ಗೆ ಸರ್ವ ಪತನ ಕಂಡ ಹಿನ್ನೆಲೆಯಲ್ಲಿ ಭಾರತ ನಿರಾಯಾಸವಾಗಿ ಗೆಲ್ಲಬಹುದೆಂದು ನಿರೀಕ್ಷಿಸಲಾಗಿತ್ತು. ಭಾರತದ ಬೌಲರ್ ಗಳ ಸಂಘಟಿತ ಬೌಲಿಂಗ್ ದಾಳಿಯಿಂದಾಗಿ ಬಾಂಗ್ಲಾ ಮತ್ತೆ ಅತ್ಯಲ್ಪ ಮೊತ್ತಕ್ಕೆ ಕುಸಿಯಿತು.
ಭಾರತದ ಪರ ಅಕ್ಷರ್ ಪಟೇಲ್ 3 , ಅಶ್ವಿನ್ ಹಾಗೂ ಸಿರಾಜ್ ತಲಾ ಎರಡು ವಿಕೆಟ್, ಉಮೇಶ್ ಯಾದವ್ ಹಾಗೂ ಉನಾದ್ಕತ್ ತಲಾ ಒಂದು ವಿಕೆಟ್ ಗಳಿಸಿದರು. ಬಾಂಗ್ಲಾ ಪರ ಲಿಂಟನ್ ದಾಸ್ (73) ಹಾಗೂ ಹಸನ್ ಮಾತ್ರ ಅರ್ಧ ಶತಕ(51) ಗಡಿ ದಾಟಿದರು.
ಗೆಲ್ಲಲು 145 ಗುರಿ ಪಡೆದ ಭಾರತ ಆರಂಭದಲ್ಲಿಯೇ ಮುಗ್ಗರಿಸಿತು. ನಾಯಕ ಕೆ.ಎಲ್.ರಾಹುಲ್ (2) ತಮ್ಮ ಕಳಪೆ ಫಾರ್ಮ್ ಮುಂದುವರಿಸಿ ಶಕೀಬ್ ಅಲಿ ಹಸನ್ ಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ದಾಂಡಿಗ ಶುಭಮನ್ ಗಿಲ್ (7), ಚೇತೇಶ್ವರ ಪೂಜಾರ (6) ವಿರಾಟ್ ಕೊಯ್ಲಿ(1) ಅತ್ಯಲ್ಪ ಮೊತ್ತಕ್ಕೆ (37/4) ಔಟಾದ ಕಾರಣ ಬಾಂಗ್ಲಾ ಗೆಲುವಿನ ಕನಸು ಕಾಣಲು ಕಾರಣರಾದರು.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಮೆಹದಿ ಹಸನ್ 8 ಓವರ್ ಬೌಲ್ ಮಾಡಿ ಕೇವಲ 12 ರನ್ ನೀಡಿ 3 ವಿಕೆಟ್ ಗಳಿಸಿದ್ದು ಭಾರತದ ಪಾಳಯದಲ್ಲಿ ಒತ್ತಡಕ್ಕೆ ಕಾರಣವಾಯಿತು. ಪ್ರಥಮ ಇನ್ನಿಂಗ್ಸ್ ನಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್(93) ಹಾಗೂ ಶ್ರೇಯಸ್ ಅಯ್ಯರ್(87) ಅವರಿಂದಾಗಿ ಇನ್ನಿಂಗ್ಸ್ ಮುನ್ನಡೆಗೆ ಕಾರಣವಾಗಿತ್ತು. ಇದೀಗ ದ್ವಿತೀಯ ಇನ್ನಿಂಗ್ಸ್ ನಲ್ಲೂ ಗೆಲುವಿನ 100 ರನ್ ಕಲೆ ಹಾಕಲು ಭಾರತ ಇವರನ್ನೇ ನೆಚ್ಚಿಕೊಂಡಿದೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಅಕ್ಷರ್ ಪಟೇಲ್ ಔಟಾಗದೆ 26 ಹಾಗೂ ಜೆ.ಉನಾದ್ಕತ್ 3 ರನ್ ಗಳೊಂದಿಗೆ ಕ್ರೀಸ್ ನಲ್ಲಿದ್ದಾರೆ. ಇನ್ನೂ ಎರಡು ದಿನಗಳ ಆಟ ಬಾಕಿ ಇದೆ.





