ಆಂಧ್ರ ಪ್ರದೇಶ: ಇಲ್ಲಿನ ವಿಶಾಖಪಟ್ಟಣಂನ ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಜೈಸ್ವಾಲ್ ಅವರ ದ್ವಿಶತಕ ಬಲದಿಂದ ಟೀಮ್ ಇಂಡಿಯಾ 396 ರನ್ ಕಲೆ ಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾಗೆ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು. ಭಾರತ ತಂಡ ನಾಯಕನ ಜೊತೆಗೂಡಿ ಇನಿಂಗ್ಸ್ ಆರಂಭಿಸಿದ ಜೈಸ್ವಾಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ್ದರು. ಆದರೆ ಮತ್ತೊಂದೆಡೆ ಕೇವಲ 14 ರನ್ಗಳಿಸಿ ರೋಹಿತ್ ಶರ್ಮಾ ಔಟಾದರು.
ಆ ಬಳಿಕ ಬಂದ ಶುಭ್ಮನ್ ಗಿಲ್ 34 ರನ್ ಬಾರಿಸಿದರೆ, ಶ್ರೇಯಸ್ ಅಯ್ಯರ್ 27 ರನ್ ಕಲೆಹಾಕಿದರು. ಇನ್ನು ರಜತ್ ಪಾಟಿದಾರ್ 32, ಅಕ್ಷರ್ ಪಟೇಲ್ 27 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಇದರ ಬೆನ್ನಲ್ಲೇ ಶ್ರೀಕರ್ ಭರತ್ (17) ಕೂಡ ವಿಕೆಟ್ ಒಪ್ಪಿಸಿದರು.

ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಯಶಸ್ವಿ ಜೈಸ್ವಾಲ್ 151 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿ ಟೀಮ್ ಇಂಡಿಯಾಗೆ ಆಸರೆಯಾಗಿ ನಿಂತರು. ಅಲ್ಲದೆ ಮೊದಲ ದಿನದಾಟದ ಅಂತ್ಯಕ್ಕೆ ಜೈಸ್ವಾಲ್ 179 ರನ್ ಬಾರಿಸಿ ಭಾರತ ತಂಡ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 336 ಕ್ಕೆ ತಂದು ನಿಲ್ಲಿಸಿದರು.
ಇಂದು ತಮ್ಮ ಅದೇ ಫಾರ್ಮ್ ಮುಂದುವರಿಸಿದ ಜೈಸ್ವಾಲ್ 290 ಎಸೆತಗಳಲ್ಲಿ 19 ಬೌಂಡರಿ ಮತ್ತು 7 ಸಿಕ್ಸರ್ ಸಹಿತ 209 ಬಾರಿಸಿ ತಂಡಕ್ಕೆ ಆಸರೆಯಾದರು. ಅಶ್ವಿನ್ (20) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಜಸ್ಪ್ರೀತ್ ಬುಮ್ರಾ 6 ರನ್ಗಳಿಸಿ ರೆಹಾನ್ ಅಹ್ಮದ್ ಎಸೆತದಲ್ಲಿ ಕ್ಯಾಚ್ ನೀಡಿದರು. ಇನ್ನು ಕೊನೆಯ ವಿಕೆಟ್ ಆಗಿ ಮುಖೇಶ್ ಕುಮಾರ್ (0) ಔಟಾದರು. ಈ ಮೂಲಕ ಟೀಮ್ ಇಂಡಿಯಾ ತನ್ನ ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 396 ರನ್ ಕಲೆಹಾಕಿ ಆಲೌಟ್ ಆಯಿತು.
ಇತ್ತ ಇಂಗ್ಲೆಂಡ್ ಪರ ಆಂಡರ್‌ಸನ್ 47/3, ಬಷೀರ್ 138/3 ಮತ್ತು ರೆಹನ್ ಅಹ್ಮದ್ 65/3 ವಿಕೆಟ್ ಪಡೆದು ಮಿಂಚಿದರು.





