ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊಲದ ಟೆಸ್ಟ್‌ನ ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 126 ರನ್‌ಗಳ ಮುನ್ನಡೆ ಸಾಧಿಸಿದೆ.
ಎರಡನೇ ದಿನದಾಟಕ್ಕೆ 7 ವಿಕೆಟ್ ಕಳೆದುಕೊಂಡು 421 ರನ್ ಗಳಿಸಿ ಮೂರನೇ ದಿನಕ್ಕೆ ಆಟ ಕಾಯ್ದಿರಿಸಿಕೊಂಡಿದ್ದ ಟೀಂ ಇಂಡಿಯಾ ಮೂರನೇ ದಿನದಾಟದಲ್ಲಿ ಉತ್ತಮ ಪ್ರದರ್ಶನ ತೋರಲಿಲ್ಲ. 81 ರನ್ ಗಳಿಸಿದ್ದ ಜಡೇಜಾ ಮೂರನೇ ದಿನ 87 ರನ್ ಗಳಿಸಿ ವಿವಾದಾತ್ಮಕ ಔಟ್‌ಗೆ ಬಲಿಯಾದರು. ಅಕ್ಷರ್ 44 ರನ್ ಬಾರಿಸಿ ನಿರ್ಗಮಿಸಿದರು. ಟೀಂ ಇಂಡಿಯಾ ಅಂತಿಮವಾಗಿ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 436ರನ್ ಬಾರಿಸಿ ಸರ್ವಪತನ ಕಂಡಿತು.
ಇಂಗ್ಲೆಂಡ್ ಪರ ಜೋ ರೂಟ್ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ಗಮನ ಸೆಳೆದರು. ಟಾಮ್ ಮತ್ತು ರಹೆನ್ ಅಹ್ಮದ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
190 ರನ್‌ಗಳ ಹಿನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 77 ಓವರ್ ಬ್ಯಾಟಿಂಗ್ ಮಾಡಿ, ಪ್ರಮುಖ 6 ವಿಕೆಟ್ ಕಳೆದುಕೊಂಡು 316 ರನ್ ಕಲೆಹಾಕಿ 126 ರನ್‌ಗಳ ಮುನ್ನಡೆಯೊಂದಿಗೆ ನಾಲ್ಕನೇ ದಿನಕ್ಕೆ ಆಟ ಕಾಯ್ದಿರಿಸಿಕೊಂಡಿದೆ.
ಇಂಗ್ಲೆಂಡ್ ಪರ ಡಕೆಟ್ (44), ಕ್ರಾಲಿ (31), ಬೆನ್ ಫೋಕ್ಸ್ (34) ಚೇತರಿಕೆ ಆಟ ಆಡಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ಮತ್ತೊಂದೆಡೆ ಸುಭದ್ರವಾಗಿ ಇನ್ನಿಂಗ್ಸ್ ಕಟ್ಟಿದ ಪೋಪ್ ಶತಕ ಬಾರಸುವ ಮೂಲಕ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕಮ್‌ಬ್ಯಾಕ್ ಮಾಡಲು ಸಹಕರಿಸಿದರು. ಪೋಪ್ ಶತಕ (148) ಮತ್ತು ಸ್ಪಿನ್ನರ್ ರೆಹನ್ ಅಹ್ಮದ್ (16) ರನ್ ಗಳಿಸಿ ನಾಲ್ಕನೇ ದಿನಕ್ಕೆ ಆಟ ಕಾಯ್ದಿರಿಸಿಕೊಂಡಿದ್ದಾರೆ.
ಟೀಂ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ ಮತ್ತು ಜಸ್‌ಪ್ರಿತ್ ಬುಮ್ರಾ ತಲಾ ಎರಡು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಜಡೇಜಾ ತಲಾ ಒಂದು ವಿಕೆಟ್ ಕಿತ್ತರು.
ಇನ್ನಿಂಗ್ಸ್ ವಿವರ:
ಮೊಲದ ಇನ್ನಿಂಗ್ಸ್: ಇಂಗ್ಲೆಂಡ್- 246-10 (64.3 ಓವರ್), ಟೀಂ ಇಂಡಿಯಾ- 436-10 (121 ಓವರ್)
ಎರಡನೇ ಇನ್ನಿಂಗ್ಸ್: ಇಂಗ್ಲೆಂಡ್- 316-6 (77 ಓವರ್)





