Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅಂತಿಮ ಎಸೆತದಲ್ಲಿ ರಿಂಕು ಬಾರಿಸಿದ ಸಿಕ್ಸರ್‌ ಯಾಕೆ ಕೌಂಟ್‌ ಆಗಲಿಲ್ಲ? ಇಲ್ಲಿದೆ ಮಾಹಿತಿ

ನಿನ್ನೆ ( ನವೆಂಬರ್‌ 23 ) ವಿಶಾಖಪಟ್ಟಣದ ವೈಎಸ್‌ ರಾಜಶೇಖರ ರೆಡ್ಡಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್‌ ಇಂಡಿಯಾ 2 ವಿಕೆಟ್‌ಗಳ ರೋಚಕ ಜಯವನ್ನು ಸಾಧಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ ತಂಡ ಸ್ಟೀವನ್‌ ಸ್ಮಿತ್‌ ಅವರ ಅರ್ಧಶತಕ ಹಾಗೂ ಜೋಶ್‌ ಇಂಗ್ಲಿಸ್‌ ಅವರ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 208 ರನ್‌ ಗಳಿಸಿ ಭಾರತಕ್ಕೆ ಗೆಲ್ಲಲು 209 ರನ್‌ಗಳ ಬೃಹತ್‌ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಟೀಮ್‌ ಇಂಡಿಯಾ 19.5 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 209 ರನ್‌ ಕಲೆಹಾಕಿ ಗೆಲುವನ್ನು ಕಂಡು ಸರಣಿಯಲ್ಲಿ ಶುಭಾರಂಭ ಮಾಡಿತು.

ತಂಡದ ಪರ ಇಶಾನ್‌ ಕಿಶನ್‌ 39 ಎಸೆತಗಳಲ್ಲಿ 58 ರನ್‌ ಬಾರಿಸಿದರೆ, ನಾಯಕ ಸೂರ್ಯಕುಮಾರ್‌ ಯಾದವ್‌ 42 ಎಸೆತಗಳಲ್ಲಿ 80 ರನ್‌ ಬಾರಿಸಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ರಿಂಕು ಸಿಂಗ್‌ 14 ಎಸೆತಗಳಲ್ಲಿ 4 ಬೌಂಡರಿ ಸಹಿತ ಅಜೇಯ 22 ರನ್‌ ಬಾರಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು.

ಇನ್ನು ಭಾರತಕ್ಕೆ ಗೆಲ್ಲಲು ಅಂತಿಮ ಎಸೆತದಲ್ಲಿ 1 ರನ್‌ ಬಾರಿಸಬೇಕಾದ ಅಗತ್ಯವಿತ್ತು. ಈ ಸಂದರ್ಭದಲ್ಲಿ ರಿಂಕು ಸಿಂಗ್‌ ಬ್ಯಾಟಿಂಗ್‌ ಮಾಡುತ್ತಿದ್ದರು ಹಾಗೂ ಸೀನ್‌ ಅಬಟ್‌ ಬೌಲಿಂಗ್‌ ಮಾಡಿದರು. ಸೀನ್‌ ಅಬಟ್‌ ಎಸೆದ ಅಂತಿಮ ಎಸೆತಕ್ಕೆ ರಿಂಕು ಸಿಂಗ್‌ ಭರ್ಜರಿ ಸಿಕ್ಸರ್‌ ಬಾರಿಸುವ ಮೂಲಕ ತಮ್ಮ ಹಳೆಯ ಐಪಿಎಲ್‌ ಪಂದ್ಯಗಳನ್ನು ನೆನಪಿಸಿಬಿಟ್ಟರು. ಆದರೆ ರಿಂಕು ಸಿಂಗ್‌ ಬಾರಿಸಿದ ಈ ಸಿಕ್ಸರ್‌ ಗಣನೆಗೆ ಬಾರಲೇ ಇಲ್ಲ. ಏಕೆಂದರೆ ಸೀನ್‌ ಅಬಟ್‌ ಎಸೆದ ಆ ಎಸೆತ ನೋ ಬಾಲ್‌ ಆಗಿತ್ತು. ಗೆಲುವಿಗೆ ಒಂದೇ ರನ್‌ ಅಗತ್ಯವಿದ್ದ ಕಾರಣ ನೋ ಬಾಲ್‌ ಮೊದಲು ಗಣನೆಗೆ ಬಂದು ಭಾರತ ಜಯ ಸಾಧಿಸಿತು ಹಾಗೂ ರಿಂಕು ಸಿಂಗ್‌ ಬಾರಿಸಿದ ಸಿಕ್ಸರ್‌ ರನ್‌ ಕೌಂಟ್‌ಗೆ ಅರ್ಹತೆ ಪಡೆಯಲಿಲ್ಲ. ಆದರೂ ಸಹ ರಿಂಕು ಸಿಂಗ್‌ ಬಾರಿಸಿದ ಆ ಸಿಕ್ಸರ್‌ ಕ್ರಿಕೆಟ್‌ ಅಭಿಮಾನಿಗಳ ಫೇವರಿಟ್‌ ಆಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ