Mysore
19
overcast clouds
Light
Dark

ರಾಮಮಂದಿರ ಉದ್ಘಾಟನೆ: ಶುಭ ಕೋರಿದ ಆಸೀಸ್‌ ಕ್ರಿಕೆಟಿಗ ಡೆವಿಡ್‌ ವಾರ್ನರ್‌!

ಅಯೋಧ್ಯೆ ರಾಮಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹದ ‘ಪ್ರಾಣ ಪ್ರತಿಷ್ಠಾಪನೆಯಾಗಿರುವ ಶುಭ ಸಮಾರಂಭಕ್ಕೆ ಆಸೀಸ್‌ ಕ್ರಿಕೆಟಿಗ ಡೇವಿಡ್ ವಾರ್ನರ್ ಶುಭಾಶಯಗಳನ್ನು ಕೋರಿದ್ದಾರೆ. ವಾರ್ನರ್‌ ತಮ್ಮ ಇಸ್ಟಾಗ್ರಾಮ್‌ ಖಾತೆಯಲ್ಲಿ ‘ಜೈ ಶ್ರೀ ರಾಮ್’ ಘೋಷಣೆಯೊಂದಿಗೆ ತಮ್ಮ ಅಭಿನಂದನಾ ಸಂದೇಶವನ್ನು ಭಾರತೀಯರಿಗೆ ತಿಳಿಸಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶ್ರೀರಾಮಚಂದ್ರನ ಆಗಮನದ ಫೋಟೋವೊಂದನ್ನು ಹಂಚಿಕೊಂಡಿರುವ ವಾರ್ನರ್, ಜೈ ಶ್ರೀರಾಮ್ ಇಂಡಿಯಾ ಎಂದು ಬರೆದುಕೊಂಡಿದ್ದಾರೆ. ಇದೀಗ ಡೇವಿಡ್ ವಾರ್ನರ್ ಅವರ ಈ ಪೋಸ್ಟ್​ಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

ಟೆಸ್ಟ್‌ಗೆ ವಾರ್ನರ್ ವಿದಾಯ:
ಡೇವಿಡ್ ವಾರ್ನರ್ ಈಗಾಗಲೇ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಸಿಡ್ನಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಮೂಲಕ ವಾರ್ನರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಹಾಗೆಯೇ ಏಕದಿನ ವಿಶ್ವಕಪ್ ಫೈನಲ್ ಬಳಿಕ ಒಡಿಐ ಕ್ರಿಕೆಟ್​ನಿಂದ ಕೂಡ ನಿವೃತ್ತಿ ಘೋಷಿಸಿದ್ದಾರೆ.

ಆಸ್ಟ್ರೇಲಿಯಾ ಪರ 203 ಟೆಸ್ಟ್ ಇನಿಂಗ್ಸ್​ ಆಡಿರುವ ಡೇವಿಡ್ ವಾರ್ನರ್ ಆರಂಭಿಕನ ಸ್ಥಾನದಲ್ಲಿ ಒಟ್ಟು 8786 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಆರಂಭಿಕ ಬ್ಯಾಟರ್ ಎಂಬ ದಾಖಲೆಯೊಂದಿಗೆ ವಾರ್ನರ್ ವಿದಾಯ ಹೇಳಿದ್ದರು.

ಏಕದಿನ ವೃತ್ತಿ ಜೀವನ:
ಆಸ್ಟ್ರೇಲಿಯಾ ಪರ 161 ಏಕದಿನ ಇನ್ನಿಂಗ್ಸ್‌ಗಳನ್ನು ಆಡಿರುವ ವಾರ್ನರ್ 45.01 ರ ಸರಾಸರಿಯಲ್ಲಿ ಒಟ್ಟು 6,932 ರನ್ ಗಳಿಸಿದ್ದಾರೆ. ಈ ವೇಳೆ 22 ಶತಕಗಳು ಮತ್ತು 33 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ವಾರ್ನರ್ ಟಿ20 ಕ್ರಿಕೆಟ್​ನಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ. ಒಂದು ವೇಳೆ ಮುಂಬರುವ ಟಿ20 ವಿಶ್ವಕಪ್​ಗಾಗಿ ಆಸ್ಟ್ರೇಲಿಯಾ​ ತಂಡದಲ್ಲಿ ಸ್ಥಾನ ಪಡೆಯದಿದ್ದರೆ ಚುಟುಕು ಕ್ರಿಕೆಟ್​ಗೂ ವಿದಾಯ ಹೇಳಬಹುದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ