ನವಿ ಮುಂಬೈ : ಇಲ್ಲಿನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳೆಯರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚೊಚ್ಚಲ ಮಹಿಳಾ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಇತ್ತ ಭಾರತ ವಿರುದ್ಧ ಸೋತ ದ.ಆಫ್ರಿಕಾ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮಳೆಯಿಂದಾಗಿ ಪಂದ್ಯ ಎರಡು ತಾಸುಗಳಷ್ಟು ವಿಳಂಬವಾಗಿ ಆರಂಭವಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಆತಿಥೇಯರಿಗೆ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಉತ್ತಮ ಆರಂಭವೊದಗಿಸಿದರು. ಇದನ್ನೆ ಹಿಂಬಾಲಿಸಿದ ತಂಡ 50 ಓವರ್‌ಗಳಲ್ಲಿ 298 ರನ್‌ಗಳಿಸಿ ದಕ್ಷಿಣ ಆಫ್ರಿಕಾಗೆ 299ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ 45 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕೆಳೆದುಕೊಂದು ಸೋಲುಂಡಿತು.
ಸ್ಮೃತಿ, ಶಫಾಲಿ ಇರ್ವರು ಮೊದಲ ವಿಕೆಟ್‌ಗೆ 17.4 ಓವರ್‌ಗಳಲ್ಲಿ ಶತಕದ ಜೊತೆಯಾಟ ಕಟ್ಟಿದರು. ಸ್ಮೃತಿ 58 ಎಸೆತಗಳಲ್ಲಿ 45 ರನ್ ಗಳಿಸಿದರೆ, ಶಫಾಲಿ 78 ಎಸೆತಗಳಲ್ಲಿ ಏಳು ಬೌಂಡರಿ, ಎರಡು ಸಿಕ್ಸರ್ ನೆರವಿನಿಂದ 87 ರನ್‌ಗಳಿಸಿ ವಿಶ್ವಕಪ್ ಫೈನಲ್‌ನಲ್ಲಿ ಅರ್ಧಶತಕ ಗಳಿಸಿದ ಅತಿ ಕಿರಿಯ ಆಟಗಾರ್ತಿ ಎನಿಸಿದರು. ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ್ದ ಜೆಮಿಮಾ ರೊಡ್ರಿಗಸ್, ಫೈನಲ್ ಪಂದ್ಯದಲ್ಲಿ 24 ರನ್ ಕಲೆಹಾಕಲಷ್ಟೇ ಶಕ್ತರಾದರು. ಸಫಾಲಿ ವರ್ಮಾ 78 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಹಿತ 87 ರನ್ ಗಳಿಸಿ ಔಟಾದರು.
ಉಳಿದಂತೆ ನಾಯಕಿ ಹರ್ಮನ್‌ಪ್ರೀತ್ ಕೌರ್ 20 ರನ್ ಗಳಿಸಿ ಔಟಾದರು. ಅಮಂಜೋತ್ ಕೌರ್ 12 ರನ್‌ಗಳಿಗೆ ಸುಸ್ತಾದರು. ಕೊನೆಯಲ್ಲಿ ಅಬ್ಬರಿಸಿದ ದೀಪ್ತಿ ಶರ್ಮಾ 58 ಎಸೆತಗಳಲ್ಲಿ 58 ರನ್ ಗಳಸಿ ಅರ್ಧಶತಕ ಬಾರಿಸಿದರು. ಇವರಿಗೆ ಸಾಥ್ ನೀಡಿದ ರಿಚಾ ಘೋಷ್ 24 ಎಸೆತಗಳಲ್ಲಿ 34 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ರಾಧಾ ಯಾದವ್ ಔಟಾಗದೇ 3 ರನ್ ಗಳಿಸಿದರು. ಆ ಮೂಲಕ ಭಾರತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಗಳಿಸಿತು.
ದಕ್ಷಿಣ ಆಫ್ರಿಕಾ ಪರ ಅಯಬೊಂಗಾ ಖಾಕಾ 3 ವಿಕೆಟ್ ಕಿತ್ತರೆ, ನಾನ್ಕುಲುಲೆಕೊ ಮ್ಲಾಬಾ, ನಾಡಿನ್ ಡಿ ಕ್ಲರ್ಕ್, ಕ್ಲೋಯ್ ಟ್ರೈಯಾನ್ ತಲಾ ಒಂದೊಂದು ವಿಕೆಟ್ ಪಡೆದರು. ಬೃಹತ್ ಮೊತ್ತ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ತಾಜ್ಮೀನ್ ಬ್ರಿಟ್ಜ್ 23 ರನ್ ಗಳಿಸಿ ಔಟಾದರೆ, ಅನಿಕೆ ಬಾಷ್ ಡಕ್‌ಔಟ್ ಆಗುವ ಮೂಲಕ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಸುನಿಲೂಸ್ 25, ಮರೈಝಾನ್ ಕಾಪ್ 4, ಸಿನಾಲೊ ಝಾಪ್ತಾ 16, ಅನೇರಿ ಡರ್ಕ್‌ಸನ್ 35, ಯಾರಿಂದಲೂ ನಿರೀಕ್ಷಿತ ಆಟ ಕಂಡುಬರಲೇ ಇಲ್ಲ. ಭಾರತ ತಂಡದ ಬಿಗಿ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಎಡವಿ ಪೇವಿಲಿಯನ್ ಸೇರಿದರು. ನಾಯಕಿ ಲಾರಾ 98 ಎಸೆತ ಎದುರಿಸಿ 11 ಬೌಂಡರಿ, 1 ಸಿಕ್ಸರ್ ಸಹಿತ 101 ರನ್ ಗಳಿಸಿದ್ದ ವೇಳೆ ದೀಪ್ತಿ ಶರ್ಮಾ ಸ್ಪಿನ್ ಮೋಡಿಗೆ ಬಲಿಯಾಗಿ ಅಮನ್ಜೋತ್ ಕೈಗೆ ಕ್ಯಾಚಿತ್ತು ಹೊರನಡೆದರು. ಉಳಿದಂತೆ ಚೋಲೆ ಟ್ರೈಯನ್ 9, ನದೀದ್ ಡೀ ಕ್ಲರ್ಕ್ 18 ಅಯಾಬೊಂಗಾ ಕಾಕಾ 1 ರನ್ ಗಳಿಸಿ ಔಟಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 45.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಿ 52 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ ಪ್ರಮುಖ 5 ವಿಕೆಟ್ ಕಬಳಿಸಿದರು. ಶಫಾಲಿ ವರ್ಮಾ 2, ಶ್ರೀಚಾರಿಣಿ 1 ವಿಕೆಟ್ ಪಡೆದರು. ಫೈನಲ್ಸ್ ಪಂದ್ಯದಲ್ಲಿ 87 ರನ್ ಹಾಗೂ 36ಕ್ಕೆ 2 ವಿಕೆಟ್ ಪಡೆದ ಶಫಾಲಿ ವರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ವಿಶ್ವಕಪ್‌ನ ವಿಶೇಷಗಳಿವು……………
ವಿಶ್ವಕಪ್ ನಾಕೌಟ್‌ನಲ್ಲಿ ಅತಿಹೆಚ್ಚು ರನ್‌ಗಳಿಸಿದ ಹರ್ಮನ್‌ಪ್ರೀತ್
ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಅತಿಹೆಚ್ಚು ರನ್‌ಗಳಿಸಿದ ಆಟಗಾರ್ತಿ ಎನ್ನುವ ಹಿರಿಮೆಗೆ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಭಾಜನರಾದರು. 4 ಇನಿಂಗ್ಸ್‌ನಲ್ಲಿ ಅವರು 331 ರನ್‌ಗಳಿಸಿದ್ದು, 6 ಇನಿಂಗ್ಸ್‌ನಲ್ಲಿ 330 ರನ್‌ಗಳಿಸಿದ್ದ ಬೆಲಿಂಡಾ ಕ್ಲಾರ್ಕ್ ಅವರ ದಾಖಲೆಯನ್ನು ಮುರಿದರು.
ವಿಶ್ವಕಪ್‌ನಲ್ಲಿ 200 ರನ್, 15 ವಿಕೆಟ್ ಪಡೆದ ದೀಪ್ತಿ
ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಈ ಬಾರಿಯ ವಿಶ್ವಕಪ್‌ನಲ್ಲಿ 200ಕ್ಕೂ ಅಧಿಕ ರನ್ ಹಾಗೂ 15 ವಿಕೆಟ್ ಪಡೆಯುವ ಮೂಲಕ, ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ್ತಿಯಾಗಿದ್ದಾರೆ.
ಕೊನೆಯ 10 ಓವರ್‌ಗಳಲ್ಲಿ ದಾಖಲೆಯ ರನ್ ಬಾರಿಸಿದ ರೀಚಾ ಘೋಷ್
ಭಾರತದ ರೀಚಾ ಘೋಷ್ ಅವರು ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 40 ರಿಂದ 50 ಓವರ್‌ಗಳಲ್ಲಿ 165.17ರ ಸ್ಟೈಕ್ ರೇಟ್‌ನಲ್ಲಿ 185 ರನ್‌ಗಳಿದ್ದಾರೆ. ಈ ಟೂರ್ನಿಯಲ್ಲಿ ಬ್ಯಾಟರ್ ಒಬ್ಬರು ಕೊನೆಯ 10 ಓವರ್‌ಗಳಲ್ಲಿ ದಾಖಲಿಸಿದ ಅತಿಹೆಚ್ಚು ರನ್ ಇದಾಗಿದೆ. ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ್ತಿ ಎನ್ನುವ ದಾಖಲೆಗೆ ರೀಚಾ ಘೋಷ್ ಪಾತ್ರರಾದರು. ಈ ಟೂರ್ನಿಯಲ್ಲಿ ಅವರು 12 ಸಿಕ್ಸರ್ ಸಿಡಿಸುವ ಮೂಲಕ, 2013ರ ವಿಶ್ವಕಪ್‌ನಲ್ಲಿ 12 ಸಿಕ್ಸರ್ ಸಿಡಿಸಿದ್ದಡಿಯಾಂಡ್ರಾ ಡಾಟಿನ್ ಹಾಗೂ 2017ರ ವಿಶ್ವಕಪ್‌ನಲ್ಲಿ 12 ಸಿಕ್ಸರ್ ಬಾರಿಸಿದ್ದ ಲಿಜೆಲ್ಲೆ ಲೀ ದಾಖಲೆಯನ್ನು ಸರಿಗಟ್ಟಿದರು.
ಪಂದ್ಯಕ್ಕೆ ಮಳೆ ಅಡಚಣೆ…
ಈ ಮೊದಲು ಮಳೆಯಿಂದಾಗಿ ಟಾಸ್ ವಿಳಂಬವಾಯಿತು. ಟಾಸ್‌ಗೆದ್ದ ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೊಲ್ವಾರ್ಟ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆದರೂ ಓವರ್‌ಗಳಲ್ಲಿ ಸಂಖ್ಯೆ ಕಡಿತವಾಗಲಿಲ್ಲ.
ಫೈನಲ್ ಪಂದ್ಯವು ನಿಗದಿಯಂತೆ ಸಂಜೆ 3ಕ್ಕೆ ಆರಂಭವಾಗಬೇಕಿತ್ತು. ಆದರೆ ಮಳೆಯಿಂದಾಗಿ ಎರಡು ತಾಸು ವಿಳಂಬವಾಗಿ ಆರಂಭವಾಗಿತ್ತು.





