ಮುಂಬೈ: ಈ ಬಾರಿಯ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ಆವೇಶ್ ಖಾನ್ ಅವರು ಆಟಕ್ಕಿಂತ ಹೆಚ್ಚು ವಿವಾದದಿಂದಲೇ ಸುದ್ದಿಯಾಗಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆವೇಶ್ ಖಾನ್ ಅವರ ಸಂಭ್ರಮಾಚರಣೆ ಹಲವರ ಕಣ್ಣು ಕೆಂಪಗಾಗಿಸಿತ್ತು. ಇದೀಗ ಆವೇಶ್ ಖಾನ್ ಅವರು ಇದರ ಬಗ್ಗೆ ಮಾತನಾಡಿದ್ದಾರೆ.
ಆರ್ ಸಿಬಿ ಮತ್ತು ಎಲ್ಎಸ್ ಜಿ ನಡುವಿನ ಮೊದಲ ಪಂದ್ಯವು ರೋಚಕವಾಗಿ ಅಂತ್ಯಗೊಂಡಿತ್ತು. ಕೆಎಲ್ ರಾಹುಲ್ ತಂಡವು ವಿಜೇತರಾಗಿ ಹೊರಹೊಮ್ಮಿತು. ರನ್-ಚೇಸ್ ಪೂರ್ಣಗೊಂಡಾಗ ಪಿಚ್ ನಲ್ಲಿದ್ದ ಅವೇಶ್ ಖಾನ್ ಅವರು, ಸಂಭ್ರಮಾಚರಣೆಯಲ್ಲಿ ತನ್ನ ಹೆಲ್ಮೆಟ್ ಅನ್ನು ನೆಲಕ್ಕೆ ಎಸೆದಿದ್ದರು. ಇದಕ್ಕಾಗಿ ಅವರಿಗೆ ಭಾರಿ ದಂಡವನ್ನು ವಿಧಿಸಲಾಗಿತ್ತು.
“ಹೆಲ್ಮೆಟ್ ವಿಚಾರ ಸ್ವಲ್ಪ ಹೆಚ್ಚೇ ಆಗಿತ್ತು. ನಾನು ಹಾಗೆ ಮಾಡಬಾರದಿತ್ತು ಎಂದು ಕೆಲವು ದಿನಗಳ ಬಳಿಕ ಅರ್ಥವಾಗಿತ್ತು. ಅದು ಆ ಕ್ಷಣದಲ್ಲಿ ಸಂಭವಿಸಿ ಹೋಯಿತು. ನಾನು ಹಾಗೆ ಮಾಡಬಾರದಿತ್ತು ಎಂದು ಮತ್ತೆ ನನಗನಿಸಿತು” ಎಂದು ಆವೇಶ್ ಖಾನ್ ಹೇಳಿದ್ದಾರೆ.
ಐಪಿಎಲ್ 2023 ರ ಋತುವಿನಲ್ಲಿ ಅವರ ಪ್ರದರ್ಶನದ ಬಗ್ಗೆ ಮಾತನಾಡಿದ ಅವೇಶ್ ಅವರು, ತಮ್ಮ ಮಟ್ಟವನ್ನು ತಲುಪದಿದ್ದರೂ ಅವರು ಉತ್ತಮವಾಗಿ ಆಡಿದ್ದಾರೆ ಎಂದು ಹೇಳಿದರು.