ಹೈದರಾಬಾದ್: ಅಭಿಷೇಕ್ ಶರ್ಮಾ ಅವರ ಅಮೋಘ ಶತಕ, ಟ್ರಾವಿಸ್ ಹೆಡ್ ಅವರ ಅರ್ಧಶತಕದ ಬಲದಿಂದಾಗಿ ಪಂಜಾಬ್ ಕಿಂಗ್ಸ್ ವಿರುದ್ಧ 245 ರನ್ ಚೇಸ್ ಮಾಡಿದ ಹೈದರಾಬಾದ್ ಐಪಿಎಲ್ ಇತಿಹಾಸದಲ್ಲಿಯೇ ಅತೀಹೆಚ್ಚು ರನ್ ಚೇಸ್ ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು.
ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 245 ರನ್ ಬಾರಿಸಿತು. ಈ ಮೊತ್ತ ಬೆನ್ನತ್ತಿದ ಹೈದರಾಬಾದ್ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 247 ರನ್ ಬಾರಿಸಿ 8 ವಿಕೆಟ್‌ಗಳ ಅಂತರದಿಂದ ಗೆದ್ದು ಬೀಗಿತು.
ಪಂಜಾಬ್ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್‌ಗೆ ಉತ್ತಮ ಆರಂಭ ದೊರೆಯಿತು. ಪ್ರಿಯಾಂಶ್ ಆರ್ಯ 36(13), ಪ್ರಭ್‌ಸಿಮ್ರಾನ್ 42(23) ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ 82(36) ರನ್ ಗಳಿಸಿದರೇ, ನೇಹಲ್ ವಧೇರಾ 27(22) ರನ್ ಗಳಿಸಿದರು.
ಉಳಿದಂತೆ ಶಶಾಂಕ್ ಸಿಂಗ್ 2(3), ಮ್ಯಾಕ್ಸ್‌ವೆಲ್ 3(7) ರನ್ ಬಾರಿಸಿದರು. ಸ್ಟೋಯ್ನಿಸ್ ಔಟಾಗದೆ 34(11) ರನ್ ಗಳಿಸಿದರೇ, ಏನ್ಸನ್ ಔಟಾಗದೇ 5(5) ರನ್ ಗಳಿಸಿ ಉಳಿದರು.
ಪಂಜಾಬ್ ಪರ ಹರ್ಷಲ್ ಪಟೇಲ್ ಪ್ರಮುಖ ನಾಲ್ಕು ವಿಕೆಟ್ ಪಡೆದರೆ, ಮಲಿಂಗಾ ಎರಡು ವಿಕೆಟ್ ಪಡೆದು ಮಿಂಚಿದರು.
ಎಸ್‌ಆರ್‌ಎಚ್ ಇನ್ನಿಂಗ್ಸ್: ಬೃಹತ್ ಮೊತ್ತ ಬೆನ್ನತ್ತಿದ ಹೈದರಾಬಾದ್‌ಗೆ ಭರ್ಜರಿ ಆರಂಭ ದೊರೆಯಿತು. ಆರಂಭಿಕರಾಗಿ ಬಂದ ಟ್ರಾವಿಸ್ ಹೆಡ್ 66(37) ರನ್ ಬಾರಿಸಿ ಔಟಾದರೇ, ಅಭಿಷೇಕ್ ಶರ್ಮಾ 55 ಎಸೆತಗಳಲ್ಲಿ 14 ಬೌಂಡರಿ, ಭರ್ಜರಿ 10 ಸಿಕ್ಸರ್ ಸಹಿತ 141 ರನ್ ಚಚ್ಚಿ ಪೆವಿಲಿಯನ್ ಸೇರಿದರು.
ಕೊನೆಯಲ್ಲಿ ಒಂದಾದ ಕ್ಲಾಸೆನ್ ಮತ್ತು ಇಶಾನ್ ಕಿಸಾನ್ ಔಟಾಗದೇ ಕ್ರಮವಾಗಿ 21(14), 9(6) ರನ್ ಕೆಲಹಾಕಿ ಗೆಲುವಿನ ನಗೆ ಬೀರಿದರು.
ಪಂಜಾಬ್ ಪರ ಅರ್ಶ್‌ದೀಪ್ ಸಿಂಗ್ ಮತ್ತು ಚಾಹಲ್ ತಲಾ ಒಂದೊಂದು ವಿಕೆಟ್ ಪಡೆದರು.
ಪಂದ್ಯಶ್ರೇಷ್ಠ: ಅಭಿಷೇಕ್ ಶರ್ಮಾ