ನವದೆಹಲಿ: ನನ್ನ ಕ್ರಿಕೆಟ್ ಕೋಚಿಂಗ್ ಜೀವನದಲ್ಲಿ ಇಂತಹ ತಂಡವೊಂದನ್ನು ನೋಡಿಯೇ ಇಲ್ಲ, ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರಲ್ಲಿ ಯಾವುದೇ ಒಗ್ಗಟ್ಟಿಲ್ಲ ಎಂದು 2011ರ ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅಮೇರಿಕಾ, ವೆಸ್ಟ್ ಇಂಡೀಸ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ 9ನೇ ಆವೃತ್ತಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ನೀರಸ ಪ್ರದರ್ಶನ ತೋರಿತು. ಯುಎಸ್‌ಎ, ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ಸೋಲುವ ಮೂಲಕ ವಿಶ್ವಕಪ್‌ನ ಲೀಗ್ ಹಂತದಲ್ಲಿಯೇ ತನ್ನ ಅಭಿಯಾನವನ್ನು ಮುಗಿಸಿತು.
ಟಿ20 ವಿಶ್ವಕಪ್ ನ ಗುಂಪು ಹಂತದಿಂದಲೇ ಪಾಕಿಸ್ತಾನ ಹೊರಬಿದ್ದ ಬೆನ್ನಲ್ಲೇ ತಂಡದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್ ಈ ಹೇಳಿಕೆ ನೀಡಿದ್ದಾರೆ. ಆ ಮೂಲಕ ಪಾಕ್ ಕ್ರಿಕೆಟ್ ಮಂಡಳಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಭೀತಾಗಿದೆ.
ಪಾಕ್ ತಂಡದಲ್ಲಿ ಯಾವುದೇ ಒಗ್ಗಟ್ಟಿಲ್ಲ. ನಾವೆಲ್ಲರೂ ಒಂದು ತಂಡ ಎಂದು ಹೇಳಿಕೊಂಡರು ಆದರೆ ತಂಡವಾಗಿ ಪ್ರದರ್ಶನ ತೋರುವಲ್ಲಿ ವಿಫಲರಾದರು. ಎಲ್ಲರೂ ಬೇರೆ ಬೇರೆಯಾಗಿಯೇ ಇರುತ್ತಿದ್ದರು. ಒಬ್ಬರು ಇನ್ನೊಬ್ಬರ ನೆರವಿಗೆ ಬರುತ್ತಿರಲಿಲ್ಲ. ನಾನು ನಾನಾ ತಂಡಗಳಲ್ಲಿ ಕೆಲಸ ಮಾಡಿದ್ದೇನೆ. ಈ ರೀತಿಯ ತಂಡದ ಸ್ಥಿತಿಯನ್ನು ನಾನು ನೋಡಿಯೇ ಇಲ್ಲ ಎಂದು ಕರ್ಸ್ಟನ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಪಾಕ್ ಆಟಗಾರರಲ್ಲಿ ಸಾಮ್ಯತೆಯಿಲ್ಲ. ಕೌಶಲ ಮಟ್ಟದಲ್ಲಿ ತುಂಬಾ ಹಿಂದುಳಿದಿದ್ದಾರೆ. ಆಟಗಾರರು ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಜಿಯೋಸೂಪರ್.ಟಿವಿ4 ವರದಿ ಮಾಡಿದೆ.