ಈ ಬಾರಿಯ ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾದ ಹೆಡ್ ಕೋಚ್ ಸ್ಥಾನದಿಂದ ರಾಹುಲ್ ದ್ರಾವಿಡ್ ಬಿಡುಗಡೆ ಹೊಂದಲಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ತಮ್ಮ ಕಾರ್ಯಾವಧಿ ಮುಗಿಯಲಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಇನ್ನು ತಮ್ಮ ಅಧಿಕಾರಾವಧಿ ಮುಗಿದ ಬಳಿಕ ಟೀಂ ಇಂಡಿಯಾಗೆ ಗುಡ್‌ಬೈ ಹೇಳಲಿದ್ದು, ಮತ್ತೆ ಎಂದಿಗೂ ಮುಖ್ಯ ಕೋಚ್ ಹುದ್ದೆಗಾಗಿ ಅರ್ಜಿಯನ್ನು ಸಲ್ಲಿಸುವುದಿಲ್ಲ ಎಂದು ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಅವರು ಟೀಂ ಇಂಡಿಯಾ ಜತೆಗಿನ ಸಂಬಂಧಕ್ಕೆ ಅಂತಿಮ ತೆರೆ ಎಳೆಯಲಿದ್ದಾರೆ.
2021ರಲ್ಲಿ ಟೀಂ ಇಂಡಿಯಾ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ದ್ರಾವಿಡ್ ಸದೃಢ ಟೀಂ ಕಟ್ಟಲು ಸಹಕರಿಸಿದ್ದರು. ಇವರ ಅವಧಿಯಲ್ಲಿ ಟೀಂ ಇಂಡಿಯಾ 2023 ರಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ಸ್ ರನ್ನರ್ಸ್ ಹಾಗೂ ಏಕದಿನ ವಿಶ್ವಕಪ್‌ನಲ್ಲಿಯೂ ರನ್ನರ್ ಅಪ್ ಆಗಿ ಹೊರಹೊಮ್ಮಿತು. ಆದರೆ ಒಮ್ಮೆಯೂ ಭಾರತ ಐಸಿಸಿ ಟ್ರೋಫಿ ಎತ್ತುವಲ್ಲಿ ಸಫಲವಾಗಿಲ್ಲ. ಇನ್ನು ಇದೇ ಜೂನ್.2, 2024 ರಿಂದ ನಡೆಯುತ್ತಿರುವ ಟಿ20 ವಿಶ್ವಕಪ್‌ಗೆ ಕೋಚ್ ಆಗಿದ್ದು, ಇದಾದ ಬಳಿಕ ಹುದ್ದೆಯಿಂದ ಕೆಳಗಿಳಿಯುವುದಾಗಿ ಸ್ವತಃ ದ್ರಾವಿಡ್ ಅವರೇ ಘೋಷಿಸಿದ್ದಾರೆ.