ಸಿಡ್ನಿ : ಸಿಡ್ನಿಯಲ್ಲಿ ನಡೆದ ಫಿಫಾ ಮಹಿಳಾ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿ ಸ್ಪೇನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಸ್ಪೇನ್ ತಂಡದ ನಾಯಕಿ ಓಲ್ಗಾ ಕಾರ್ಮೋನಾ ಏಕೈಕ ಗೋಲು ದಾಖಲಿಸಿದ್ದರು. ಈ ಗೋಲಿನೊಂದಿಗೆ ಸ್ಪ್ಯಾನಿಷ್ ಪಡೆ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು ವಿಶೇಷ.
ಉಭಯ ತಂಡಗಳು ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್ ಫುಟ್ಬಾಲ್ನಲ್ಲಿ ಫೈನಲ್ ಆಡಿದ್ದು, ಇದಾಗ್ಯೂ ಹೀಗಾಗಿ ಹೊಸ ಚಾಂಪಿಯನ್ ತಂಡವನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಪಂದ್ಯದ 29ನೇ ನಿಮಿಷಲ್ಲಿ ಕಾರ್ಮೋನಾ ಬಾರಿಸಿದ ಚೆಂಡು ಇಂಗ್ಲೆಂಡ್ ಗೋಲಿಯನ್ನು ವಂಚಿಸಿ ಬಲೆಯೊಳಗೆ ಸೇರಿತು.
The crowning moment. 🏆@SEFutbolFem | #FIFAWWC
— FIFA Women's World Cup (@FIFAWWC) August 20, 2023
ಇದಾದ ಬಳಿಕ ಇಂಗ್ಲೆಂಡ್ ಆಟಗಾರ್ತಿಯರು ಸಮಬಲ ಸಾಧಿಸಲು ಕೊನೆಯವರೆಗೆ ಹೋರಾಟ ನಡೆಸಿದರು. ಆದರೆ ದ್ವಿತಿಯಾರ್ಧದಲ್ಲೇ ರಕ್ಷಣಾತ್ಮಕ ಆಟಕ್ಕೆ ಹೆಚ್ಚಿನ ಒತ್ತು ನೀಡಿದ ಸ್ಪೇನ್ ಪಡೆಯು ಮೊದಲಾರ್ಧದ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.
ಈ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ್ತಿಯರಿಗಿಂತ ಸ್ಪೇನ್ ತಂಡ ಚೆಂಡಿನ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದ್ದರು. ಇಂಗ್ಲೆಂಡ್ ಶೇ.70 ರಷ್ಟು ನಿಖರ ಪಾಸ್ಗಳ ಮೂಲಕ ಗಮನ ಸೆಳೆದರೆ, ಸ್ಪೇನ್ ಆಟಗಾರ್ತಿಯರು ಶೇ.81 ರಷ್ಟು ಪಾಸ್ಗಳ ಮೂಲಕ ಪಂದ್ಯವನ್ನು ಹತೋಟಿಗೆ ತೆಗೆದುಕೊಂಡಿದ್ದರು. ಈ ಮೂಲಕ ಪೂರ್ಣ ಸಮಯದವರೆಗೆ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಸ್ಪೇನ್ ತಂಡವು ಅಂತಿಮವಾಗಿ 1-0 ಅಂತರದ ಮುನ್ನಡೆಯೊಂದಿಗೆ ಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಸ್ಪೇನ್ನ ಐತಾನಾ ಬೊನ್ಮಾಟಿಗೆ ಗೋಲ್ಡನ್ ಬಾಲ್ ಪ್ರಶಸ್ತಿ ಲಭಿಸಿದರೆ, ಇಂಗ್ಲೆಂಡ್ ಗೋಲ್ ಕೀಪರ್ ಮೇರಿ ಇಯರ್ಪ್ಸ್ ಗೋಲ್ಡನ್ ಗ್ಲೋವ್ ಅವಾರ್ಡ್ ಪಡೆದರು.
ಹಾಗೆಯೇ ಬೆಸ್ಟ್ ಯಂಗ್ ಪ್ಲೇಯರ್ ಪ್ರಶಸ್ತಿ ಸ್ಪೇನ್ನ ಸಲ್ಮಾ ಪ್ಯಾರಲ್ಯುಲೋಗೆ ನೀಡಲಾಗಿದೆ. ಇನ್ನು ಟೂರ್ನಿಯಲ್ಲಿ ಅತ್ಯಧಿಕ ಗೋಲು ಬಾರಿಸಿದ ಗೋಲ್ಡನ್ ಬೂಟ್ ಪ್ರಶಸ್ತಿಯು ಜಪಾನಿನ ಹಿನಾತಾ ಪಾಲಾಗಿದೆ.
ಮಹಿಳಾ ವಿಶ್ವಕಪ್ ಗೆದ್ದ ರಾಷ್ಟ್ರಗಳು :
- 1991- ಯುಎಸ್ಎ
- 1995- ನಾರ್ವೆ
- 1999- ಯುಎಸ್ಎ
- 2003- ಜರ್ಮನಿ
- 2007- ಜರ್ಮನಿ
- 2011- ಜಪಾನ್
- 2015- ಯುಎಸ್ಎ
- 2019- ಯುಎಸ್ಎ
- 2023- ಸ್ಪೇನ್





