Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಹೊಸ ಕ್ಲಬ್ ಪರ ಕಣಕ್ಕಿಳಿಯಲಿದ್ದಾರೆ ಖ್ಯಾತ ಫುಟ್​ಬಾಲ್ ತಾರೆ ನೇಮರ್

ಬ್ರೆಝಿಲ್​ನ ಖ್ಯಾತ ಫುಟ್​ಬಾಲ್ ತಾರೆ ನೇಮರ್ ಜೂನಿಯರ್ ಅಲ್ ಹಿಲಾಲ್ ಕ್ಲಬ್ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಪ್ರಸ್ತುತ ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಲು ನೇಮರ್ ನಿರ್ಧರಿಸಿದ್ದು, ಇದರ ಬೆನ್ನಲ್ಲೇ ಸ್ಟಾರ್ ಆಟಗಾರನನ್ನು ಟ್ರಾನ್ಸ್​ಫರ್​ ಮಾಡಲು ಪಿಎಸ್​ಜಿ ಮುಂದಾಗಿದೆ. ಅದರಂತೆ ಇದೀಗ ಸೌದಿ ಅರೇಬಿಯಾದ ಖ್ಯಾತ ಕ್ಲಬ್ ಅಲ್ ಹಿಲಾಲ್ ಜೊತೆ ಪಿಎಸ್‌ಜಿ ವರ್ಗಾವಣೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.

2017 ರಲ್ಲಿ ಸ್ಪೇನ್​ನ ಖ್ಯಾತ ಫುಟ್​ಬಾಲ್ ಕ್ಲಬ್ ಬಾರ್ಸಿಲೋನಾ ನೇಮರ್ ಜೂನಿಯರ್ ಅವರನ್ನು ಸಾರ್ವಕಾಲಿಕ ದಾಖಲೆಯ ಮೊತ್ತಕ್ಕೆ ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಕ್ಕೆ ವರ್ಗಾವಣೆ ಮಾಡಿಕೊಂಡಿತ್ತು. ಅದರಂತೆ 6 ವರ್ಷಗಳ ಕಾಲ ಪಿಎಸ್​ಜಿ ಪರ ಕಣಕ್ಕಿಳಿದಿದ್ದ ನೇಮರ್ 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದರು.

ಇದೀಗ ಆರು ವರ್ಷಗಳ ಬಳಿಕ ಯುರೋಪ್ ಫುಟ್​ಬಾಲ್ ಅಂಗಳವನ್ನು ತೊರೆಯಲು ನೇಮರ್ ನಿರ್ಧರಿಸಿದ್ದಾರೆ. ಈ ನಿರ್ಧಾರದ ಬೆನ್ನಲ್ಲೇ ಸೌದಿ ಅರೇಬಿಯಾ ಕ್ಲಬ್ ಬ್ರೆಝಿಲ್ ಸೂಪರ್ ಸ್ಟಾರ್​ನನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನೇಮರ್ ವರ್ಗಾವಣೆ ಮುಖ್ಯಾಂಶಗಳು:

  • ಈಗಾಗಲೇ ಪ್ಯಾರಿಸ್ ಸೇಂಟ್-ಜರ್ಮೈನ್ ಹಾಗೂ ಅಲ್ ಹಿಲಾಲ್ ನಡುವೆ ಒಪ್ಪಂದಕ್ಕೆ ಸಹಿ
  • ನೇಮರ್ ಜೊತೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡ ಅಲ್​ ಹಿಲಾಲ್
  • ಅಲ್ ಹಿಲಾಲ್ ಪರ ಕೂಡ 10 ನಂಬರ್​ನ ಜೆರ್ಸಿಯಲ್ಲಿ  ಕಣಕ್ಕಿಳಿಯಲಿರುವ ನೇಮರ್
  • ವರ್ಗಾವಣೆಗಾಗಿ 100 ಮಿಲಿಯನ್ ಯುರೋಗಿಂತ ಕಡಿಮೆ ಮೊತ್ತ ಪಡೆಯಲಿರುವ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್
  • ಈ ವಾರ ಸೌದಿಗೆ ಪ್ರಯಾಣಿಸಲಿರುವ ನೇಮರ್ ಜೂನಿಯರ್

ನೇಮರ್ ಜೊತೆ ಅಲ್ ಹಿಲಾಲ್ ಡೀಲ್:

ಅಲ್ ಹಿಲಾಲ್ ಕ್ಲಬ್ ಹಾಗೂ ನೇಮರ್ ಜೊತೆಗಿನ ಒಪ್ಪಂದ ಮೊತ್ತ ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದಾಗ್ಯೂ ಫ್ರಾನ್ಸ್‌ನ ಪ್ರಮುಖ ಕ್ರೀಡಾ ಪತ್ರಿಕೆ L’Equipe , ಅಲ್​ ಹಿಲಾಲ್ ನೇಮರ್​ಗೆ ಒಟ್ಟು 160 ಮಿಲಿಯನ್ ಯುರೋಗಳನ್ನು ಪಾತಿಸಲಿದೆ ಎಂದು ವರದಿ ಮಾಡಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 1450 ಕೋಟಿ ರೂ.

ಪಿಎಸ್​ಜಿ ನೀಡುವ ವೇತನ ಎಷ್ಟು?

ಕಳೆದ ಆರು ವರ್ಷಗಳಿಂದ ಫ್ರಾನ್ಸ್​ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್​ ಪರ ಆಡುತ್ತಿರುವ ನೇಮರ್ ಜೂನಿಯರ್ ವಾರ್ಷಿಕವಾಗಿ 71 ಮಿಲಿಯನ್ ಯೂರೋ ವೇತನ ಪಡೆಯುತ್ತಿದ್ದಾರೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 643 ಕೋಟಿ ರೂ. ಇದೀಗ ಇದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಪಾವತಿಸಲು ಅಲ್ ಹಿಲಾಲ್ ಕ್ಲಬ್ ಮುಂದಾಗಿದೆ.

ಸೌದಿ ಅರೇಬಿಯಾದಲ್ಲಿ ರೊನಾಲ್ಡೊ ಕಿಂಗ್:

ಸೌದಿ ಪ್ರೊ ಲೀಗ್​ನಲ್ಲಿ ಅಲ್​ ನಾಸ್ರ್ ಪರ ಆಡುತ್ತಿರುವ ಕ್ರಿಸ್ಟಿಯಾನೊ ರೊನಾಲ್ಡೊ ವಾರ್ಷಿಕ ವೇತನವಾಗಿ 1,770 ಕೋಟಿ ರೂ. ಪಡೆಯುತ್ತಿದ್ದಾರೆ. ಇತ್ತ ರೊನಾಲ್ಡೊ ಬೆನ್ನಲ್ಲೇ ಸ್ಯಾಡಿಯೊ ಮಾನೆ, ಕರೀಮ್ ಬೆನ್​ಝೆಮಾ ಸೇರಿದಂತೆ ಯುರೋಪ್​ ಲೀಗ್​ನಲ್ಲಿ ಮಿಂಚಿದ್ದ ಸ್ಟಾರ್ ಆಟಗಾರರು ಸೌದಿ ಅರೇಬಿಯಾ ಕ್ಲಬ್​ನತ್ತ ಮುಖ ಮಾಡಿದ್ದರು.

ಇದೀಗ ನೇಮರ್ ಜೂನಿಯರ್ ಕೂಡ ಸೌದಿ ಕ್ಲಬ್ ಪರ ಕಣಕ್ಕಿಳಿಯಲು ಮುಂದಾಗಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸೌದಿ ಪ್ರೊ ಲೀಗ್ ಫುಟ್​ಬಾಲ್ ಅಂಗಳದ ಹೊಸ ರಣರಂಗವಾಗಿ ಮಾರ್ಪಟ್ಟರೂ ಅಚ್ಚರಿಪಡಬೇಕಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ