ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾ ಗೆಲುವಿಗೆ 157 ರನ್ ಸಾಧಾರಣ ಗುರಿ ನೀಡಿದೆ.
ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕಳಪೆ ಆಟ ಮುಂದುವರಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಶ್ರೀಲಂಕಾ ಮಾರಕ ಬೌಲಿಂಗ್ ದಾಳಿಗೆ ನಲುಗಿ 33.2 ಓವರ್ ಗಳಲ್ಲಿ 156 ರನ್ ಗೆ ಆಲೌಟ್ ಆಯಿತು.
ಬ್ಯಾಟಿಂಗ್ ಸ್ವರ್ಗ ಎಂದು ಹೆಸರುವಾಸಿಯಾಗಿರುವ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ನಿರೀಕ್ಷೆಯಂತೆ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ನಾಯಕನ ಯೋಜನೆ ಹುಸಿಗೊಳಿಸುವಂತೆ ಬ್ಯಾಟ್ ಬೀಸಿದ ಇಂಗ್ಲೆಂಡ್ ಬ್ಯಾಟರ್ಸ್, ಲಂಕಾ ಸಂಘಟಿತ ಬೌಲಿಂಗ್ ಗೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
ಏಕಾಂಗಿ ಹೊರಾಟ ನಡೆಸಿದ ಬೆನ್ ಸ್ಟೋಕ್ಸ್ 6 ಬೌಂಡರಿ ಸಹಿತ 43 ರನ್ ಬಾರಿಸಿ ತಂಡದ ಪರ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ಇಂಗ್ಲೆಂಡ್ ಆರಂಭಿಕ ಆಟಗಾರರಾದ ಜಾನ್ನಿ ಬೈರ್ ಸ್ಟೋವ್ 30 ಗಳಿಸಿದರೆ ಡೇವಿಡ್ ಮಲನ್ 28 ರನ್ ಗಳಿಸಿ ಕ್ರಮವಾಗಿ ಕಸುನ್ ರಜಿತಾ ಹಾಗೂ ಏಂಜಲೊ ಮಾಥ್ಯೂಸ್ ಗೆ ವಿಕೆಟ್ ಒಪ್ಪಿಸಿದರು. ಜೊ ರೂಟ್(3) ಜೋಸ್ ಬಟ್ಲರ್(8) ಲಿಯಾಮ್ ಲಿವಿಂಗ್ ಸ್ಟೋನ್ (1) ಮೊಯೀನ್ ಅಲಿ (15) ಕ್ರಿಸ್ ವೂಕ್ಸ್ (0) ಡೇವಿಡ್ ವಿಲ್ಲಿ (10) ಅದಿಲ್ ರಶೀದ್ (2) ಮಾರ್ಕ್ ವುಡ್ (5) ರನ್ ಬಾರಿಸಿದರು.
ಲಂಕಾ ಪರ ಆಘಾತಕಾರಿ ಬೌಲಿಂಗ್ ನಡೆಸಿದ ಲಹಿರು ಕುಮಾರ 3 ವಿಕೆಟ್ ಪಡೆದು ಸಂಭ್ರಮಿಸಿದರೆ ಅನುಭವಿ ಆಟಗಾರ ಏಂಜಲೊ ಮಾಥ್ಯೂಸ್ ಹಾಗೂ ಕಸುನ್ ರಜಿತಾ ತಲಾ 2 ಹಾಗೂ ಮಹೀಶ್ ತೀಕ್ಷಣ ಒಂದು ವಿಕೆಟ್ ಪಡೆದರು.