ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 229 ರನ್ ಗಳ ಭರ್ಜರಿ ಜಯ ಗಳಿಸಿದೆ.
ಇಲ್ಲಿನ ವಾಂಖೆಡೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಪ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಸೌತ್ ಆಪ್ರಿಕಾ ತಂಡ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 399 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದನ್ನು ಚೇಸಿಂಗ್ ಮಾಡಿದ ಇಂಗ್ಲೆಂಡ್ 22 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 170 ರನ್ ಗಳಿಸಿ, 229 ರನ್‌ಗಳ ಹಿನಾಯ ಸೋಲನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 399 ರನ್ ಗಳಿಸಿತು.
ಮೊದಲ ಓವರ್ ನಲ್ಲಿ ಡಿಕಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ದ.ಆಫ್ರಿಕಾಗೆ ರೀಜಾ ಹೆಂಡ್ರಿಕ್ಸ್ ಮತ್ತು ಡ್ಯೂಸನ್ 121 ರನ್ ಜೊತೆಯಾಟವಾಡಿ ಆಧರಿಸಿದರು. ರೀಜಾ ಹೆಂಡ್ರಿಕ್ಸ್ 85 ರನ್ ಗಳಿಸಿದರೆ, ವಾನ್ ಡರ್ ಡ್ಯೂಸನ್ 60 ರನ್ ಗಳಿಸಿದರು. ಹಂಗಾಮಿ ನಾಯಕ ಐಡೆನ್ ಮಾರ್ಕ್ರಮ್ 42 ರನ್ ಗಳಿಸಿದರು.
ಮತ್ತೊಂದೆಡೆ ಹೆನ್ರಿಕ್ ಕ್ಲಾಸೆನ್ ಮತ್ತು ಮ್ಯಾಕ್ರೊ ಯಾನ್ಸನ್ ಅದ್ಭುತ ಜೊತೆಯಾಟದಿಂದ ನೆರವಾದರು. ಹೊಡೆಬಡಿ ಹೊಡೆತಗಳಿಂದ ಪ್ರೇಕ್ಷಕರನ್ನು ರಂಜಿಸಿದ ಜೋಡಿ 151 ರನ್ ಜೊತೆಯಾಟವಾಡಿದರು. ಕ್ಲಾಸನ್ ಕೇವಲ 67 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ನೆರವಿನಿಂದ 109 ರನ್ ಬಾರಿಸಿದರು.
ಮತ್ತೊಂದೆಡೆ ಮನಬಂದಂತೆ ಚಚ್ಚಿದ ಯಾನ್ಸನ್ ಕೇವಲ 42 ಎಸೆತಗಳಲ್ಲಿ 75 ರನ್ ಬಾರಿಸಿದರು. ಯಾನ್ಸನ್ ಏಳು ಸಿಕ್ಸರ್ ಬಾರಿಸಿ ಮಿಂಚಿದರು. ಕೊನೆಯ ಹತ್ತು ಓವರ್ ಗಳಲ್ಲಿ 143 ರನ್ ಹರಿದು ಬಂತು.
ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್‌ಗೆ ಯೋಜಿತ ಆರಂಭ ದೊರೆಯಲಿಲ್ಲ. ಆರಂಭಿಕರಾದ ಜಾನಿ ಬೈರ್ ಸ್ಟೋವ್ 10 ರನ್ ಗೆ ಲುಂಗಿ ಗಿಡಿಗೆ ವಿಕೆಟ್ ಒಪ್ಪಿಸಿದರೇ, ಡೇವಿಡ್ ಮಲನ್(6) ಹಾಗೂ ಜೋ ರೂಟ್ (2) ಮಾರ್ಕೋ ಜಾನ್ಸನ್ ದಾಳಿಗೆ ವಿಕೆಟ್ ನೀಡಿದರು. ನಾಯಕ ಬಟ್ಲರ್ ಸೇರಿದಂತೆ ಮತ್ತಾರಿಂದಲೂ ನಿರೀಕ್ಷಿತ ಆಟ ಕಂಡುಬರಲಿಲ್ಲ. ಕಡೇ ಗಳಿಗೆಯಲ್ಲಿ ಸ್ಪೋಟಕ ಬ್ಯಾಟ್ ಬೀಸಿದ ಮಾರ್ಕ್ ವುಡ್ 43 ಗಳಿಸಿದರೆ ಗಸ್ ಅಟ್ಕಿನ್ಸನ್ 35 ರನ್ ಗಳಿಸಿದರು. ರೀಸ್ ಟಾಪ್ಲಿ ಗಾಯದಿಂದಾಗಿ ನಿವೃತ್ತಿಯಾದ ಪರಿಣಾಮ 170 ಕ್ಕೆ ಆಲೌಟ್ ಆಯಿತು.
ಸೌತ್ ಆಫ್ರಿಕಾ ಪರ ಜೆರಾಲ್ಡ್ 3 ವಿಕೆಟ್ ಪಡೆದರೆ ಲುಂಗಿ ಗಿಡಿ, ಮಾರ್ಕೋ ಜಾನ್ಸನ್ 2 ಹಾಗೂ ಕಗಿಸೊ ರಬಾಡ ಮತ್ತು ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಪಡೆದರು.
ಪಂದ್ಯ ಶ್ರೇಷ್ಠ : ಹೆನ್ರಿಕ್ ಕ್ಲಾಸನ್