ಪ್ಯಾರಿಸ್: ಪ್ಯಾರಿಸ್‌ನಲ್ಲಿ ಕಳೆದ ತಡರಾತ್ರಿ ವಿಶ್ವದ ಮಹಾನ್ ಕ್ರೀಡಾಮೇಳ ಒಲಿಂಪಿಕ್ಸ್ ಕೂಟಕ್ಕೆ ತೆರೆಬಿದ್ದಿದೆ.
ಕಳೆದ 19 ದಿನಗಳಿಂದ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಬಾರಿ ಹಲವು ದಾಖಲೆಗಳು ನಿರ್ಮಾಣವಾಗಿವೆ.
ಈ ಒಲಿಂಪಿಕ್ಸ್‌ನಲ್ಲಿ ಹೊಸ ತಾರೆಗಳು ಉದಯಿಸಿದ್ದು, ಹತ್ತಾರು ಅವಿಸ್ಮರಣೀಯ ಕ್ರೀಡಾಸ್ಪೂರ್ತಿಯ ಕ್ಷಣಗಳು ದಾಖಲಾಗಿವೆ.
ಕಾರ್ಯಕ್ರಮದಲ್ಲಿ ಮುಂದಿನ 2028ರಲ್ಲಿ ಒಲಿಂಪಿಕ್ಸ್ ಕೂಟಕ್ಕೆ ಆತಿಥ್ಯ ವಹಿಸಲಿರುವ ಮನರಂಜನೆ ನಗರಿ ಲಾಸ್ ಏಂಜಲೀಸ್‌ಗೆ ಬಾವುಟವನ್ನು ಹಸ್ತಾಂತರಿಸಲಾಯಿತು. ಆತಿಥೇಯ ಫ್ರಾನ್ಸ್‌ನ ಈಜು ಚಾಂಪಿಯನ್ ಲಿಯೊ ಮಾರಷಾ ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಿದರು.
ಈ ಬಾರಿ ಒಟ್ಟು 126 ಪದಕಗಳನ್ನು ಜಯಿಸಿದ ವಿಶ್ವದ ದೊಡ್ಡಣ್ಣ ಅಮೆರಿಕಾವು ತನ್ನ ದೇಶದ ಲಾಸ್ ಏಂಜಲೀಸ್‌ನಲ್ಲಿ ಮುಂದಿನ ಬಾರಿ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವುದು ಅತ್ಯಂತ ವಿಶೇಷವೆನಿಸಿದೆ.
ಈ ಬಾರಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ 200ಕ್ಕೂ ಹೆಚ್ಚು ದೇಶಗಳ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಪಣಕ್ಕಿಟ್ಟಿದ್ದರು. ಇಲ್ಲಿ ಪದಕ ಗೆದ್ದವರು ಸಂಭ್ರಮಿಸಿದರು. ಸೋತವರು ಮುಂದಿನ ಬಾರಿ ಜಯಿಸುವ ಕನಸಿನೊಂದಿಗೆ ತಮ್ಮ ತಮ್ಮ ದೇಶಗಳಿಗೆ ಮರಳಿದರು.