Mysore
17
scattered clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ದುಲೀಪ್‌ ಟ್ರೋಫಿ 2023: ಕೊನೆಗೂ ಪ್ರಶಸ್ತಿ ಬರ ನೀಗಿಸಿಕೊಂಡ ದಕ್ಷಿಣ ವಲಯ

ಬೆಂಗಳೂರು: ಹಲವು ವರ್ಷಗಳ ದುಲೀಪ್ ಟ್ರೋಫಿ ಪ್ರಶಸ್ತಿ ಬರವನ್ನು ಕೊನೆಗೂ ದಕ್ಷಿಣ ವಲಯ ನೀಗಿಸಿಕೊಂಡಿದ್ದು, ಪಶ್ಚಿಮ ವಲಯ ವಿರುದ್ಧದ ಫೈನಲ್ ಪಂದ್ಯದಲ್ಲಿ 75 ರನ್ ಗಳ ಜಯ ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್ ಟ್ರೋಫಿ ಫೈನಲ್  ಪಂದ್ಯದಲ್ಲಿ ಪಶ್ಚಿಮ ವಲಯ ತಂಡವನ್ನು 75 ರನ್​ಗಳಿಂದ ಮಣಿಸಿದ ದಕ್ಷಿಣ ವಲಯ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್, ಚೇತೇಶ್ವರ್ ಪೂಜಾರರಂತಹ ಸ್ಟಾರ್ ಆಟಗಾರರ ದಂಡನ್ನೇ ಹೊಂದಿದ್ದ ಪಶ್ಚಿಮ ವಲಯ ತಂಡ ಈ ಪಂದ್ಯದ ಗೆಲ್ಲುವ ಫೆವರೆಟ್ ಎನಿಸಿಕೊಂಡಿತ್ತು. ಆದರೆ ಕನ್ನಡಿಗ ವಿಧ್ವತ್ ಕಾವೇರಪ್ಪ (Vidhwath Kaverappa) ದಾಳಿಗೆ ನಲುಗಿದ ಪ್ರಿಯಾಂಕ್ ಪಾಂಚಾಲ್ ಪಡೆ ಸುಲಭವಾಗಿ ಸೋಲೊಪ್ಪಿಕೊಂಡಿತು.

ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ನೀಡಿದ 298 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಶ್ಚಿಮ ವಲಯ 222ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ 75 ರನ್ ಗಳ ವಿರೋಚಿತ ಸೋಲು ಕಂಡಿತು.

ಮೊದಲ ಇನ್ನಿಂಗ್ಸ್​ನಲ್ಲೇ 67 ರನ್​ಗಳ ಹಿನ್ನಡೆ ಅನುಭವಿಸಿದ ಪಶ್ಚಿಮ ವಲಯ ತಂಡ ಎರಡನೇ ಇನ್ನಿಂಗ್ಸ್​ನಲ್ಲೂ ಮುಗ್ಗರಿಸಿತು.  ಆರಂಭಿಕ ಪೃಥ್ವಿ 7 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರೆ, ನಾಯಕನ ಇನ್ನಿಂಗ್ಸ್ ಆಡಿದ ಪ್ರಿಯಾಂಕ್ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿ 95 ರನ್ ಬಾರಿಸಿ ಔಟಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ 48 ರನ್ ಗಳಿಸಿದ್ದು ಬಿಟ್ಟರೆ,  ಸೂರ್ಯ ಕುಮಾರ್ 4 ರನ್ ಹಾಗೂ ಚೇತೇಶ್ವರ್ ಪೂಜಾರ 15 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು.

ಅಂತಿಮವಾಗಿ ಪಶ್ಚಿಮ ವಲಯ ತಂಡ 222 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ 75 ರನ್​ಗಳ ಹೀನಾಯ ಸೋಲೊಪ್ಪಿಕೊಂಡಿತು. ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ವಿಧ್ವತ್ ಕಾವೇರಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಹಾಗೂ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!