ಹೊಸದಿಲ್ಲಿ : 19ರ ಹರೆಯ ದಿವ್ಯಾ ದೇಶಮುಖ್ ಅನುಭವಿ ಆಟಗಾರ್ತಿ ಕೊನೆರು ಹಂಪಿ ಅವರನ್ನು ಮಣಿಸುವ ಮೂಲಕ 2025ರ ಮಹಿಳಾ ಚೆಸ್ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಜಾರ್ಜಿಯಾದಲ್ಲಿ ನಡೆದ ಈ ವಿಶ್ವಕಪ್ ಫೈನಲ್‌ನಲ್ಲಿ ಚೆಸ್ ವಿಶ್ವಕಪ್ ಗೆದ್ದ ಮೊದಲ ಭಾರತೀಯ ಮಹಿಳಾ ಚೆಸ್ ತಾರೆ ಎಂಬ ಹೆಗ್ಗಳಿಕೆಗೆ ದಿವ್ಯಾ ಭಾಜನರಾಗಿದ್ದಾರೆ.
ಇಬ್ಬರ ನಡುವೆ ಶನಿವಾರ, ಭಾನುವಾರ ನಡೆದ ಫೈನಲ್ ಪಂದ್ಯಗಳ ನಂತರ ಸ್ಕೋರ್ 1-1ರಲ್ಲಿ ಸಮವಿತ್ತು. ಬಳಿಕ ಸೋಮವಾರ ನಡೆದ ಟೈ ಬ್ರೇಕರ್‌ನಲ್ಲಿ ಮೊದಲಿಗೆ ಡ್ರಾ ಸಾಧಿಸಿದ ದಿವ್ಯಾ, ಎರಡನೇ ಸುತ್ತಿನಲ್ಲೂ 2.5-1.5 ಅಂತರದಲ್ಲಿ ಗೆಲುವಿನ ನಗೆ ಬೀರಿದರು.
ಕಳೆದ ಮೂರು ವಾರಗಳಿಂದ ಜಾರ್ಜಿಯಾದ ಬಟುಮಿಯಲ್ಲಿ ನಡೆದ ಮಹಿಳಾ ಚೆಸ್ ವಿಶ್ವಕಪ್ನಲ್ಲಿ ದಿವ್ಯಾ ದೇಶಮುಖ್ ಫೈನಲ್ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಅವರ ನಂತರ, ಭಾರತದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ಕೂಡ ಫೈನಲ್ ತಲುಪುವ ಮೂಲಕ ಈ ಪ್ರಶಸ್ತಿ ಪಂದ್ಯವನ್ನು ಮತ್ತಷ್ಟು ವಿಶೇಷವಾಗಿಸಿದ್ದರು.
ಈ ಮೂಲಕ ಯಾರೇ ಗೆದ್ದರೂ, ಪ್ರಶಸ್ತಿ ಭಾರತದ ಪಾಲಾಗುವುದರ ಜೊತೆಗೆ ಮೊದಲ ಬಾರಿಗೆ ಭಾರತೀಯ ಮಹಿಳೆಯೊಬ್ಬರು ಚೆಸ್ ವಿಶ್ವಕಪ್ ಚಾಂಪಿಯನ್ ಆಗುತ್ತಿದ್ದರು. ಅದರಂತೆ ನಡೆದ ಫೈನಲ್ ಪಂದ್ಯದಲ್ಲಿ ಕೊನೆರು ಹಂಪಿ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿದ್ದರೂ, ಯುವ ಆಟಗಾರ್ತಿಯ ಮುಂದೆ ಅನುಭವಿ ಕೊನೆರು ಹಂಪಿ ಅವರು ತಲೆಬಾಗಲೇಬೇಕಾಯಿತು.





