Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ನನ್ನ ಮತ್ತು ಧೋನಿ ನಡುವೆ ಉತ್ತಮ ಗೆಳತನವಿರಲಿಲ್ಲ: ಯುವರಾಜ್ ಸಿಂಗ್

ನವದೆಹಲಿ : ಭಾರತ ಕ್ರಿಕೆಟ್ ತಂಡವು ಕಂಡು ಇಬ್ಬರು ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಯುವರಾಜ್ ಸಿಂಗ್ ಹಾಗೂ ಎಂ.ಎಸ್.ಧೋನಿ. ಅವರಿಬ್ಬರೂ ಹಲವಾರು ವರ್ಷಗಳ ಕಾಲ ರಾಷ್ಟ್ರೀಯ ತಂಡಕ್ಕೆ ಸೇವೆ ಸಲ್ಲಿಸಿದ್ದು, ವಿವಿಧ ದೊಡ್ಡ ಕ್ರೀಡಾಕೂಟಗಳಲ್ಲಿನ ಪ್ರಶಸ್ತಿಗಳನ್ನು ಜಯಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ.

ಈ ಇಬ್ಬರೂ ಬ್ಯಾಟರ್ ಗಳು ಸದ್ಯ ನಿವೃತ್ತರಾಗಿದ್ದರೂ, ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧಗಳ ಕುರಿತು ಈಗಲೂ ಕೆಲವು ನಂಬಿಕೆಗಳು ಹಾಗೂ ವದಂತಿಗಳಿವೆ. ಆದರೀಗ ಅವರಿಬ್ಬರೂ ಆತ್ಮೀಯ ಗೆಳೆಯರಾಗಿರಲಿಲ್ಲ ಎಂಬ ಸಂಗತಿಯನ್ನು ಯುವರಾಜ್ ಸಿಂಗ್ ಬಹಿರಂಗ ಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

“ನಾನು ಹಾಗೂ ಧೋನಿ ಭಾರತ ತಂಡದ ಪರವಾಗಿ ಕ್ರಿಕೆಟ್ ಆಡಿದ್ದರಿಂದಾಗಿ ನಾವಿಬ್ಬರೂ ಗೆಳೆಯರಾಗಿದ್ದೇವೆ” ಎಂದು ಯುವರಾಜ್‌ ಹೇಳಿದ್ದು, ತಮ್ಮ ವೈಯಕ್ತಿಕ ಜೀವನದಲ್ಲಿ ಇಬ್ಬರೂ ಪರಸ್ಪರ ಸಂಪರ್ಕ ಹೊಂದಿಲ್ಲದಿರುವುದು ಈ ಸಂದರ್ಭದಲ್ಲಿ ಬಹಿರಂಗವಾಗಿದೆ.

“ನಾನು ಮತ್ತು ಮಾಹಿ (ಧೋನಿ) ಆತ್ಮೀಯ ಗೆಳೆಯರಲ್ಲ. ನಾವು ಒಟ್ಟಿಗೆ ಕ್ರಿಕೆಟ್ ಆಡಿದ ಕಾರಣಕ್ಕೆ ಗೆಳೆಯರಾಗಿದ್ದೇವೆ. ಮಾಹಿಯ ಜೀವನ ಶೈಲಿಯು ನನಗಿಂತ ತುಂಬಾ ಭಿನ್ನವಾಗಿರುವುದರಿಂದ ನಾವಿಬ್ಬರೂ ಆತ್ಮೀಯ ಗೆಳೆಯರಾಗಲೇ ಇಲ್ಲ. ನಾವು ಕ್ರಿಕೆಟ್ ಕಾರಣಕ್ಕೆ ಮಾತ್ರ ಗೆಳೆಯರಾಗಿದ್ದೇವೆ.

ನಾನು ಮತ್ತು ಮಾಹಿ ಮೈದಾನಕ್ಕೆ ತೆರಳಿದಾಗ ದೇಶಕ್ಕಾಗಿ ಶೇ. 100ಕ್ಕಿಂತ ಹೆಚ್ಚು ಕಾಣಿಕೆ ನೀಡಿದ್ದೇವೆ. ಆ ಪಂದ್ಯಗಳಲ್ಲಿ ಅವರು ನಾಯಕರು, ನಾನು ಉಪ ನಾಯಕ ಆಗಿರುತ್ತಿದ್ದೆ. ನಾನು ತಂಡಕ್ಕೆ ಸೇರ್ಪಡೆಯಾದಾಗ ನಾನು ಅವರಿಗಿಂತ ನಾಲ್ಕು ವರ್ಷ ಕಿರಿಯನಾಗಿದ್ದೆ. ನೀವು ನಾಯಕ ಮತ್ತು ಉಪ ನಾಯಕರಾಗಿದ್ದಾಗ ನಿರ್ಧಾರ ಕೈಗೊಳ್ಳುವಾಗ ಭಿನ್ನಾಭಿಪ್ರಾಯ ಮೂಡುವುದು ಸಹಜ” ಎಂದು ಅವರು ಹೇಳಿಕೊಂಡಿದ್ದಾರೆ.

“ಕೆಲವು ಸಮಯ ಅವರು ತೆಗೆದುಕೊಂಡ ನಿರ್ಧಾರಗಳು ನನಗೆ ಇಷ್ಟವಾಗಿರಲಿಲ್ಲ; ನಾನು ತೆಗೆದುಕೊಂಡ ನಿರ್ಧಾರಗಳು ಅವರಿಗೆ ಇಷ್ಟವಾಗಿರಲಿಲ್ಲ. ಅದು ಪ್ರತಿ ತಂಡದಲ್ಲೂ ಆಗುತ್ತದೆ. ನಾನು ನನ್ನ ವೃತ್ತಿ ಜೀವನದ ಕೊನೆಯಲ್ಲಿದ್ದಾಗ, ನನ್ನ ವೃತ್ತಿ ಜೀವನದ ಬಗ್ಗೆ ನನಗೆ ಸರಿಯಾದ ಚಿತ್ರಣ ದೊರೆಯದೆ ಇದ್ದಾಗ ನಾನು ಅವರ ಸಲಹೆಯನ್ನು ಕೇಳಿದೆ. ಆಗ ಅವರು, ಆಯ್ಕೆ ಸಮಿತಿಯು ಸದ್ಯ ನಿನ್ನನ್ನು ಪರಿಗಣಿಸುತ್ತಿಲ್ಲ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ನನಗೆ ಕನಿಷ್ಠ ಪಕ್ಷ ನೈಜ ಚಿತ್ರಣ ಬೇಕಿತ್ತು. ಆ ಘಟನೆ ನಡೆದದ್ದು 2019ರ ವಿಶ್ವಕಪ್ ಗೂ ಕೆಲವೇ ದಿನಗಳ ಮುನ್ನ. ಅದೇ ವಾಸ್ತವ” ಎಂದು ಬಹಿರಂಗಪಡಿಸಿದ್ದಾರೆ.

ಯಾವುದೇ ಕ್ರೀಡೆಯ ತಂಡದ ಸದಸ್ಯರು ಪರಸ್ಪರ ಅತ್ಯುತ್ತಮ ಗೆಳೆಯರಾಗಿರಬೇಕಾದ ಅಗತ್ಯವಿಲ್ಲ. ಆದರೆ, ಮೈದಾನಕ್ಕಿಳಿದಾಗ ಅವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತಂಡಕ್ಕೆ ನೀಡಬೇಕು ಎಂದು ಯುವರಾಜ್ ಸಿಂಗ್ ಒತ್ತಿ ಹೇಳಿದ್ದಾರೆ.

ಯುವರಾಜ್ ಸಿಂಗ್ ಹಾಗೂ ಎಂ.ಎಸ್.ಧೋನಿ ಅತ್ಯುತ್ತಮ ಗೆಳೆಯರಲ್ಲವಾದರೂ, ಅವರಿಬ್ಬರೂ ಒಂದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ