ಮೈಸೂರು : ಕರ್ನಾಟಕದ ಭರವಸೆಯ ಚೆಸ್ ಚಾಂಪಿಯನ್ ಧಾತ್ರಿ ಉಮೇಶ್ ಯುನೈಟೆಡ್ ಅರಬ್ ಎಮಿರೈಟ್ಸ್ ನಲ್ಲಿ ಈ ತಿಂಗಳು ನಡೆಯಲಿರುವ ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ಕಳೆದ ವರ್ಷದ ಅಂತ್ಯದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಚೆಸ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಚಾಪು ಮೂಡಿಸಲು ಸಜ್ಜಾಗಿದ್ದಾರೆ. ಐದನೇ ವಯಸ್ಸಿಗೆ ಚೆಸ್ ಆಟ ಆಡಲು ಪ್ರಾರಂಭಿಸಿದ ಧಾತ್ರಿ, ಮೊದಲಿಗೆ ಮೈಸೂರು ಚೆಸ್ ಸೆಂಟರ್‌ನ ಸುರೇಶ್ ಅವರ ಮಾರ್ಗದರ್ಶನದಲ್ಲಿ ಅನಂತರ ಬೆಂಗಳೂರಿನ ಅರವಿಂದ ಶಾಸ್ತ್ರಿಯವರ ಬಳಿ ಚದುರಂಗದ ಪಟ್ಟುಗಳನ್ನು ಕಲಿತು ಇದೀಗ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಲು ಸಿದ್ಧವಾಗಿದ್ದಾರೆ.
ಈ ಬಾರಿಯ ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್ ಯು.ಎ.ಯಿನ ಆಲ್ ಅಮೀನ್‌ನಲ್ಲಿ ಡಿಸೆಂಬರ್ 12 ರಿಂದ ಡಿಸೆಂಬರ್ 22 ರವರೆಗೆ ಆಯೋಜನೆಗೊಂಡಿದೆ. ಜಗತ್ತಿನ ಬಹುತೇಕ ಎಲ್ಲ ಚದುರಂಗದ ಆಟಗಾರರು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಧಾತ್ರಿ ಟೂರ್ನಿಯಲ್ಲಿ ಭಾಗವಹಿಸಲು ಡಿಸೆಂಬರ್ 11ರಂದು ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ.
ಲೇಖಕ ಎಸ್ ಉಮೇಶ್ ಮತ್ತು ಬೃಂದಾ ದಂಪತಿಗಳ ಪುತ್ರಿಯಾದ ಧಾತ್ರಿ ಮೈಸೂರಿನ ಎನ್ ಪಿಎಸ್ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿ ಇದೀಗ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದಾರೆ. ಎಕ್ಸ್ಪರ್ಟ್ ಕಾಲೇಜಿನ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಾದ ಡಾ. ವಿಜಯನ್ ಅವರು ಧಾತ್ರಿಯ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಧಾತ್ರಿ ನಮ್ಮ ಕಾಲೇಜಿನ ಹೆಮ್ಮೆ. ಆಕೆ ಮುಂಬರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ, ರಾಜ್ಯಕ್ಕೆ ಮತ್ತು ತಮ್ಮ ಕಾಲೇಜಿಗೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದ್ದಾರೆ.





