ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
ಆ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ ಜೊತೆಗೆ ಪ್ಲೇ ಆಫ್ ಗೆ ಅರ್ಹತೆ ಪಡೆದುಕೊಂಡಿತು.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜೆಮೀಮಾ ರೋಡಿಗ್ರಸ್ 58, ಆಲಿಸ್ ಕ್ಯಾಪ್ಸಿ 48 ಅವರ ಅಮೋಘ ಆಟದಿಂದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.
ಈ ಗುರಿ ಬೆನ್ನಟ್ಟಿದ್ದ ಆರ್ ಸಿಬಿ ಪರ ತಂಡದ ನಾಯಕಿ ಸ್ಮೃತಿ ಮಂದನಾ ಕೇವಲ 5 ರನ್ ಗಳಿಗೆ ಔಟಾಗುವ ಮೂಲಕ ನಿರಾಸೆ ಉಂಟುಮಾಡಿದರು. ನಂತರ ಸೋಫಿ ಮೊಲಿನೆಕ್ಸ್ 33, ಎಲ್ಲಿಸ್ ಪೆರ್ರಿ 49 ರನ್ ಗಳ ನೆರವಿನಿಂದ ಗೆಲುವಿನ ಆಸೆ ಜೀವಂತವಾಗಿಟ್ಟುಕೊಂಡಿತ್ತು.
ನಂತರ ಬಂದ ರಿಚಾ ಘೋಷ್ ಬಿರುಸಿನ ಆಟವಾಡಿ ಗಮನ ಸೆಳೆದರು. ಕೊನೆ ಓವರ್ ನಲ್ಲಿ 17 ರನ್ ಬೇಕಿದ್ದಾಗ 2 ಸಿಕ್ಸರ್ ಸಿಡಿಸಿದರು. ಆದರೆ, ಕೊನೆ ಎಸೆತದಲ್ಲಿ 2 ರನ್ ಬೇಕಿದ್ದಾಗ ರಿಚಾ ರನೌಟ್ ಆಗುವುದರೊಂದಿಗೆ ಆರ್‌ಸಿಬಿ ಗೆಲುವನ್ನು ಡೆಲ್ಲಿ ಕಸಿದುಕೊಂಡಿತು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 180 ರನ್ ಗಳಿಸುವ ಮೂಲಕ ಒಂದು ರನ್‌ಗಳಿಂದ ಪರಾಭವಗೊಂಡಿತು.
ಪಂದ್ಯ ಶ್ರೇಷ್ಠ: ಜೆಮೀಮಾ ರೋಡಿಗ್ರಸ್