Mysore
20
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಮುಂಬೈ ವಿರುದ್ಧ ರೋಚಕ ಗೆಲುವು ಕಂಡ ಡೆಲ್ಲಿ ಕ್ಯಾಪಿಟಲ್ಸ್‌

ದೆಹಲಿ : ಇಲ್ಲಿನ ಅರುಣ್‌ ಜೇಟ್ಲಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ 17ನೇ ಐಪಿಎಲ್‌ನ 43ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮುಂಬೈ ಇಂಡಿಯನ್ಸ್‌ ವಿರುದ್ಧ 10 ರನ್‌ಗಳ ಗೆಲುವನ್ನು ದಾಖಲಿಸಿತು.

ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌ ಫೀಲ್ಡಿಂಗ್‌ ಆರಿಸಿಕೊಂಡು ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್‌ ಮೆಕ್‌ಗುರ್ಕ್‌ ಅಬ್ಬರದ ಅರ್ಧಶತಕ, ಶಾಯ್‌ ಹೋಪ್‌ ಮತ್ತು ಟ್ರಿಸ್ಟನ್‌ ಸ್ಟಬ್ಸ್‌ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 257 ರನ್‌ ಕಲೆಹಾಕಿ 258 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಮುಂಬೈ ಇಂಡಿಯನ್ಸ್‌ ತಿಲಕ್‌ ವರ್ಮಾ, ಪಾಂಡ್ಯ ಹಾಗೂ ಟಿಮ್‌ ಡೇವಿಡ್‌ ಹೋರಾಟದ ನಡುವೆಯೂ ವಿಫಲವಾಯಿತು. ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 247 ರನ್‌ ಗಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜೇಸನ್‌ ಫ್ರೇಸರ್‌ ಮೆಕ್‌ಗುರ್ಕ್‌ ಹಾಗೂ ಅಭಿಷೇಕ್‌ ಪೊರೆಲ್‌ 114 ರನ್‌ಗಳ ಜತೆಯಾಟವನ್ನಾಡುವ ಮೂಲಕ ಭರ್ಜರಿ ಆರಂಭವನ್ನು ಕಟ್ಟಿಕೊಟ್ಟರು. ಅಭಿಷೇಕ್‌ ಪೊರೆಲ್‌ 36 (27) ರನ್‌ ಗಳಿಸಿದರೆ, 27 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 84 ರನ್‌ ಬಾರಿಸಿದರು. ಇನ್ನುಳಿದಂತೆ ಶಾಯ್‌ ಹೋಪ್‌ 41 (17) ರನ್‌, ನಾಯಕ ರಿಷಭ್‌ ಪಂತ್‌ 29 (19) ರನ್‌, ಅಕ್ಷರ್ ಪಟೇಲ್‌ ಅಜೇಯ 11 (6) ರನ್‌ ಮತ್ತು ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 48 (25) ರನ್‌ ಬಾರಿಸಿದರು.

ಮುಂಬೈ ಇಂಡಿಯನ್ಸ್‌ ಪರ ಲೂಕ್‌ ವುಡ್‌, ಜಸ್‌ಪ್ರೀತ್‌ ಬುಮ್ರಾ, ಪಿಯೂಷ್‌ ಚಾವ್ಲಾ ಮತ್ತು ಮೊಹಮ್ಮದ್‌ ನಬಿ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡರು.

ಮುಂಬೈ ಇಂಡಿಯನ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಇಶಾನ್‌ ಕಿಶನ್‌ 20 (14) ರನ್‌ ಮತ್ತು ರೋಹಿತ್‌ ಶರ್ಮಾ 8(8) ರನ್‌ ಗಳಿಸಿದರು. ಸೂರ್ಯಕುಮಾರ್‌ ಯಾದವ್‌ 26 (13) ರನ್‌ ಕಲೆಹಾಕಿದರು. ಬಳಿಕ ನಾಲ್ಕನೇ ವಿಕೆಟ್‌ಗೆ ಒಂದಾದ ತಿಲಕ್‌ ವರ್ಮಾ ಹಾಗೂ ನಾಯಕ ಹಾರ್ದಿಕ್‌ ಪಾಂಡ್ಯ 71 ರನ್‌ಗಳ ಜತೆಯಾಟವಾಡುವ ಮೂಲಕ ಗೆಲುವಿನ ನಿರೀಕ್ಷೆ ಹುಟ್ಟಿಸಿದರು. ತಿಲಕ್‌ ವರ್ಮಾ 63 (32) ರನ್‌ ಮತ್ತು ಹಾರ್ದಿಕ್‌ ಪಾಂಡ್ಯ 46 (24) ರನ್‌ ಬಾರಿಸಿದರು. ನಂತರ ಟಿಮ್‌ ಡೇವಿಡ್‌ ಸಹ 37 (17) ರನ್‌ ಬಾರಿಸಿ ಗೆಲುವಿನ ನಿರೀಕ್ಷೆ ಹುಟ್ಟುಹಾಕಿ ವಿಕೆಟ್‌ ಒಪ್ಪಿಸಿದರು. ಇನ್ನುಳಿದಂತೆ ನೇಹಲ್‌ ವಾಡೆರಾ 4 (2) ರನ್‌, ಮೊಹಮ್ಮದ್‌ ನಬಿ 7 (4) ರನ್‌, ಪಿಯೂಷ್‌ ಚಾವ್ಲಾ 10 (4) ರನ್‌ ಹಾಗೂ ಲೂಕ್‌ ವುಡ್‌ ಅಜೇಯ 9 (3) ರನ್‌ ಕಲೆಹಾಕಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ರಸಿಖ್‌ ಡರ್‌ ಸಲಾಮ್‌ 3 ವಿಕೆಟ್‌, ಮುಕೇಶ್‌ ಕುಮಾರ್‌ 3 ಮತ್ತು ಖಲೀಲ್‌ ಅಹ್ಮದ್‌ 2 ವಿಕೆಟ್‌ ಪಡೆದರು.

Tags:
error: Content is protected !!