Mysore
28
few clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಡೆಲ್ಲಿ ಕ್ಯಾಪಿಟಲ್ಸ್‌ ಮಣಿಸಿದ ಟೈಟನ್ಸ್‌; ಶಮಿ, ರಶೀದ್‌ ಅಮೋಘ ಬೌಲಿಂಗ್

ನವದೆಹಲಿ (ಪಿಟಿಐ): ಯುವ ಆಟಗಾರ ಸಾಯ್‌ ಸುದರ್ಶನ್‌ ಅವರ ಸೊಗಸಾದ ಬ್ಯಾಟಿಂಗ್‌ ಮತ್ತು ಮೊಹಮ್ಮದ್ ಶಮಿ ಹಾಗೂ ರಶೀದ್ ಖಾನ್ ಅವರ ಅಮೋಘ ಬೌಲಿಂಗ್‌ ನೆರವಿನಿಂದ ಗುಜರಾತ್‌ ಟೈಟನ್ಸ್‌ ತಂಡ ಐಪಿಎಲ್‌ ಟೂರ್ನಿಯಲ್ಲಿ ಸತತ ಎರಡನೇ ಜಯ ಸಾಧಿಸಿತು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಬಳಗ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 ರನ್ ಗಳಿಸಿದರೆ, ಟೈಟನ್ಸ್‌ 18.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 163 ರನ್‌ ಗಳಿಸಿ ಗೆದ್ದಿತು. ಡೇವಿಡ್‌ ವಾರ್ನರ್‌ ನೇತೃತ್ವದ ಡೆಲ್ಲಿಗೆ ಎದುರಾದ ಎರಡನೇ ಸೋಲು ಇದು.

ಅಜೇಯ 62 ರನ್‌ ಗಳಿಸಿದ ಸುದರ್ಶನ್‌, ಟೈಟನ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 48 ಎಸೆತಗಳನ್ನು ಎದುರಿಸಿದ ಅವರು 4 ಬೌಂಡರಿ ಮತ್ತು 2 ಸಿಕ್ಸರ್‌ ಹೊಡೆದರು.

ವೃದ್ಧಿಮಾನ್‌ ಸಹಾ, ಶುಭಮನ್‌ ಗಿಲ್‌ ಮತ್ತು ಹಾರ್ದಿಕ್‌ ಪಾಂಡ್ಯ (5) ಬೇಗನೇ ಔಟಾದರು. ಸುದರ್ಶನ್‌ ಹಾಗೂ ವಿಜಯ್‌ ಶಂಕರ್‌ (29 ರನ್‌, 23 ಎ.) ನಾಲ್ಕನೇ ವಿಕೆಟ್‌ಗೆ 53 ರನ್‌ ಸೇರಿಸಿದರು. ವಿಜಯ್‌ ಔಟಾದ ಬಳಿಕ ಬಂದ ಡೇವಿಡ್‌

ಮಿಲ್ಲರ್‌ (ಔಟಾಗದೆ 31, 16 ಎ., 4X2, 6X2) ಬಿರುಸಿನ ಆಟವಾಡಿ ಜಯದ ಹಾದಿಯನ್ನು ಸುಗಮಗೊಳಿಸಿದರು.

ಶಮಿ, ರಶೀದ್‌ ಮಿಂಚು: ಇದಕ್ಕೂ ಮುನ್ನ ಟಾಸ್ ಗೆದ್ದ ಟೈಟನ್ಸ್‌ ಬಳಗವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶಮಿ (41ಕ್ಕೆ3) ಹಾಗೂ ರಶೀದ್ ಖಾನ್ (31ಕ್ಕೆ3) ಮಿಂಚಿದರು.

ಡೆಲ್ಲಿ ತಂಡದ ಆರಂಭಿಕ ಬ್ಯಾಟರ್ ವಾರ್ನರ್ (37; 32ಎ), ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ (30; 34ಎ) ಹಾಗೂ ಕೆಳಕ್ರಮಾಂಕದಲ್ಲಿ ಅಕ್ಷರ್ ಪಟೇಲ್ (36; 22ಎ) ಕಾಣಿಕೆ ನೀಡಿದರು. ಇದರಿಂದಾಗಿ ತಂಡದ ಮೊತ್ತ 150ರ ಗಡಿ ದಾಟಿತು.

ಪ್ರಮುಖ ಬ್ಯಾಟರ್‌ಗಳಾದ ಪೃಥ್ವಿ ಶಾ, ಮಿಚೆಲ್ ಮಾರ್ಷ್ ಹಾಗೂ ಸೊನ್ನೆ ಸುತ್ತಿದ ರೀಲಿ ರೊಸೊ ಅವರ ವೈಫಲ್ಯ ತಂಡವನ್ನು ಕಾಡಿತು.

ವಾರ್ನರ್‌ ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದ ಪೃಥ್ವಿ ಶಾ ಕೇವಲ ಏಳು ರನ್ ಗಳಿಸಿ ಔಟಾದರು. ಶಮಿ ಹಾಕಿದ ಮೂರನೇ ಓವರ್‌ನಲ್ಲಿ ಪೃಥ್ವಿ ಅವರು ಅಲ್ಜರಿ ಜೋಸೆಫ್‌ಗೆ ಕ್ಯಾಚಿತ್ತರು. ಐದನೇ ಓವರ್‌ನಲ್ಲಿ ಶಮಿ ಎಸೆತದ ವೇಗ ಗುರುತಿಸುವಲ್ಲಿ ವಿಫಲರಾದರು ಮಿಚೆಲ್ ಮಾರ್ಷ್ ಕ್ಲೀನ್‌ಬೌಲ್ಡ್ ಆದರು.

ಬೌಲರ್‌ಗಳ ನಿಖರ ದಾಳಿಯಿಂದಾಗಿ ಡೆಲ್ಲಿ ತಂಡವು 67 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಕೊನೆಯ ಹಂತದ ಓವರ್‌ಗಳಲ್ಲಿ ಅಕ್ಷರ್ ಪಟೇಲ್ ಮೂರು ಸಿಕ್ಸರ್ ಹಾಗೂ ಅಭಿಷೇಕ್ ಪೊರೆಲ್ ಎರಡು ಸಿಕ್ಸರ್ ಬಾರಿಸಿದರು.

ಪಂದ್ಯ ವೀಕ್ಷಿಸಿದ ಪಂತ್‌: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಂಡಿರುವ ಡೆಲ್ಲಿ ತಂಡದ ರಿಷಭ್‌ ಪಂತ್‌ ಅವರು ಪಂದ್ಯ ವೀಕ್ಷಿಸಿದರು.

ಸಂಕ್ಷಿಪ್ತ ಸ್ಕೋರು: ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 (ಡೇವಿಡ್ ವಾರ್ನರ್ 37, ಸರ್ಫರಾಜ್ ಖಾನ್ 30, ಅಭಿಷೇಕ್ ಪೊರೆಲ್ 20, ಅಕ್ಷರ್ ಪಟೇಲ್ 36, ಮೊಹಮ್ಮದ್ ಶಮಿ 41ಕ್ಕೆ3, ಅಲ್ಜರಿ ಜೋಸೆಫ್ 29ಕ್ಕೆ2, ರಶೀದ್ ಖಾನ್ 31ಕ್ಕೆ3)

ಗುಜರಾತ್ ಟೈಟನ್ಸ್: 18.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 163 (ವೃದ್ಧಿಮಾನ್‌ ಸಹಾ 14, ಶುಭಮನ್‌ ಗಿಲ್‌ 14, ಸಾಯ್‌ ಸುದರ್ಶನ್‌ ಔಟಾಗದೆ 62, ವಿಜಯ್‌ ಶಂಕರ್‌ 29, ಡೇವಿಡ್‌ ಮಿಲ್ಲರ್ ಔಟಾಗದೆ 31, ಎರ್ನಿಕ್‌ ನಾರ್ಕಿಯಾ 39ಕ್ಕೆ 2, ಖಲೀಲ್‌ ಅಹ್ಮದ್‌ 38ಕ್ಕೆ 1, ಮಿಷೆಲ್‌ ಮಾರ್ಷ್‌ 24ಕ್ಕೆ 1) ಫಲಿತಾಂಶ: ಗುಜರಾತ್‌ ಟೈಟನ್ಸ್‌ಗೆ 6 ವಿಕೆಟ್‌ ಗೆಲುವು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!