ಉಡುಪಿ: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು ಉಡುಪಿಯ ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.
ವಿಶ್ವಕಪ್ ಗೆದ್ದ ಸಂಭ್ರಮದಲ್ಲಿರುವ ಸೂರ್ಯಕುಮಾರ್ ಅವರು ಮಂಗಳವಾರ (ಜುಲೈ. 9) ತಮ್ಮ ಪತ್ನಿ ದೇವಿಶಾ ಶೆಟ್ಟಿ ಜತೆಯಲ್ಲಿ ಉಡುಪಿಯ ಕಾಪುವಿನ ಮಾರಿಗುಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ವಿಶ್ವಕಪ್ ಗೆಲ್ಲಲ್ಲು ಮಾರಿಗುಡಿ ದೇವಾಲಯದಲ್ಲಿ ಹರಕ್ಕೆ ಹೊತ್ತಿದ್ದರು ಎನ್ನಲಾಗಿದ್ದು, ಇಂದು ಆ ಹರಕೆಯನ್ನು ತಮ್ಮ ಬಾಳ ಸಂಗಾತಿಯೊಂದಿಗೆ ಬಂದು ತೀರಿಸಿದ್ದಾರೆ. ಆ ಮೂಲಕ ವಿಶ್ವಕಪ್ ಗೆಲುವಿಗೆ ಕಾರಣರಾದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆದಿದ್ದಾರೆ.
ಇನ್ನು ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಸೂರ್ಯಕುಮಾರ್ ಯಾದವ್ ದಂಪತಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಸನ್ಮಾನಿಸಿದೆ.
ಬಳಿಕ ಮಾತನಾಡಿದ ಅವರು, ವಿಶ್ವಕಪ್ ಗೆದ್ದದ್ದು ಬಹಳ ಸಂತೋಷವಾಗಿದೆ. ನಮ್ಮ ದೇಶದಲ್ಲಿ ನಮಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಮುಂದಿನ ಫೆಬ್ರವರಿ, ಮಾರ್ಚ್ ವೇಳೆಗೆ ಇಲ್ಲಿಗೆ ಮತ್ತೊಮ್ಮೆ ಆಗಮಿಸುತ್ತೇವೆ ಎಂದರು.
ಇನ್ನು ಮುಂಬೈನಲ್ಲಿ ನಡೆದ ವಿಜಯಯಾತ್ರೆ ಸಂಬಂಧ ಕೇಳಿದ ಪ್ರಶ್ನೆಗೆ, ಬಹಳ ಸಂತೋಷವಾಯಿತು. ಅಷ್ಟೊಂದು ಜನರನ್ನು ಒಟ್ಟಾಗಿ ನೋಡುವುದು ನಮ್ಮ ಭಾಗ್ಯ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.