ಅಹಮದಾಬಾದ್ : ಏಕದಿನ ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಆಂಗ್ಲರ ವಿರುದ್ಧ ಶತಕ ಸಿಡಿಸಿ ಕಿವೀಸ್ ಪಡೆಗೆ ಗೆಲುವು ತಂದುಕೊಟ್ಟ ರಚಿನ್ ರವೀಂದ್ರ ನಿನ್ನೆಯಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ರಚಿನ್ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳು ಹರಿದಾಡುತ್ತಿವೆ. ಇದೀಗ ರಚಿನ್ ರವೀಂದ್ರ ಅವರೊಂದಿಗೆ ಕನ್ನಡದಲ್ಲಿ ಮಾಡಿರುವ ಸಂದರ್ಶನದ ವೀಡಿಯೋ ತುಣುಕು ಸದ್ದು ಮಾಡುತ್ತಿದೆ.
ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ರಚಿನ್ ನಿರೂಪಕರು ಕನ್ನಡದಲ್ಲೇ ಕೇಳುವ ಪ್ರಶ್ನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಇಂಗ್ಲಿಷ್‌ನಲ್ಲೇ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಕನ್ನಡ ಭಾಷೆ ಮೇಲಿನ ಪ್ರೀತಿಯನ್ನು ಅಭಿವ್ಯಕ್ತಪಡಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.
ನಿರೂಪಕರು ಮೊದಲು ನಿಮ್ಗೆ ರಿಪ್ಲೇ ಮಾಡೋದಕ್ಕೆ ಕಷ್ಟ ಆಗುತ್ತೆ ಅಂತಾ ನಾವು ಕನ್ನಡದಲ್ಲಿ ಪ್ರಶ್ನೆ ಕೇಳುತ್ತೇವೆ ನಡೆಯುತ್ತಲ್ಲಾ? ಎನ್ನುತ್ತಿದ್ದಂತೆ ಹೋ, ತುಂಬಾ ಸಂತೋಷ ಎಂದು ಹೇಳಿದ ರಚಿನ್, ಬಳಿಕ ಕನ್ನಡದಲ್ಲಿ ಕೇಳಿದ ಪ್ರತಿಯೊಂದು ಪ್ರಶ್ನೆಯನ್ನು ಸುಲಭವಾಗಿ ಅರ್ಥಮಾಡಿಕೊಂಡು ಇಂಗ್ಲಿಷ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.
ಕನ್ನಡದಲ್ಲಿ ಕೇಳುವ ನಿರೂಪಕರ ಪ್ರಶ್ನೆಗಳಿಗೆ ಸಂತೋಷದಿಂದಲೇ ಉತ್ತರಿಸಿದ ರಚಿನ್, ಶತಕ ಸಿಡಿಸುವುದು ಒಬ್ಬ ಕ್ರಿಕೆಟ್ ಆಟಗಾರನಿಗೆ ತುಂಬಾ ವಿಶಿಷ್ಟವಾಗಿರುತ್ತದೆ. ಆದರೆ ಭಾರತದ ಮೈದಾನದಲ್ಲಿ ಇಂತಹ ದೊಡ್ಡ ಇನಿಂಗ್ಸ್ ಆಡಿರುವುದು ನಿಜಕ್ಕೂ ಖುಷಿಯಾಗಿದೆ. ಇಂತಹ ದೊಡ್ಡ ಮೈದಾನದಲ್ಲಿ ಆಡುವುದು ನಿಜಕ್ಕೂ ಮರೆಯಲಾಗದ ಕ್ಷಣವಾಗಿದೆ. ಇದು ಮೊದಲ ಪಂದ್ಯವಾದ್ದರಿಂದ ಆಶಾದಾಯಕವಾಗಿಯೇ ಮುಂದುವರಿಯಬಹುದು ಎಂದು ಹೇಳಿದ್ದಾರೆ.
ಈ ಸೋಲಿನಿಂದ ಇಂಗ್ಲೆಂಡ್ ತಂಡವನ್ನು ಟೂರ್ನಿಯಿಂದ ಸೋಲಿಸಬಹುದು ಎಂದು ನಾನು ಹೇಳುವುದಿಲ್ಲ. ಇಂಗ್ಲೆಂಡ್ ಕೂಡ ಒಂದು ಅದ್ಭುತ ಕ್ರಿಕೆಟ್ ತಂಡ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಇನ್ನೂ ಮುಂದೆ ಸಾಗುತ್ತಾರೆ ಅಂತ ನನಗನ್ನಿಸುತ್ತದೆ. ಕೆಲವೊಮ್ಮೆ ದಿನ ನಿಮ್ಮದಾಗಿರುತ್ತದೆ, ಕೆಲವೊಮ್ಮೆ ಆಗಿರೋದಿಲ್ಲ ಅಷ್ಟೇ. ಆದ್ರೆ ಖಂಡಿತವಾಗಿಯೂ ಇಂಗ್ಲೆಂಡ್ ಚಾಂಪಿಯನ್ ಟೀಂ ಎಂದು ನಂಬುತ್ತೇನೆ ಎಂದು ಶ್ಲಾಘಿಸಿದ್ದಾರೆ.
ಹಿಂದಿರುಗುತ್ತಿರುವುದು ಸಂತೋಷ ಕೊಡುತ್ತಿದೆ. ಬೆಂಗಳೂರಿನಲ್ಲಿ ನನ್ನ ಕುಟುಂಬದೊಂದಿಗಿನ ನೆನಪುಗಳಿವೆ. ನನ್ನ ಅಜ್ಜ ಮತ್ತು ಅಜ್ಜಿಯನ್ನು ವಿಲ್ಸನ್ ಗಾರ್ಡನ್‌ನಲ್ಲಿ ನೋಡಿದ ನೆನಪು ಈಗಲೂ ನೆನಪಾಗುತ್ತೆ. ನನ್ನ ತಾಯಿ ಸಂಬಂಧಿಕರು ಇಸ್ರೋ ಬಡಾವಣೆಯಲ್ಲಿದ್ದಾರೆ. ನನಗೆ ಸಾಧ್ಯವಾದಾಗಲೆಲ್ಲಾ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ಅದು ನನಗೆ ತುಂಬಾ ಸಂತೋಷ ನೀಡುತ್ತದೆ. ಮುಂದೆ ಪಾಕಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ಆಡುವಾಗಲು ಅಭಿಮಾನಿಗಳಿಂದ ಸಾಕಷ್ಟು ಬೆಂಬಲ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಅಲ್ಲದೇ ನಮ್ಮದು ದೊಡ್ಡ ಪರಿವಾರ, ನನ್ನ ಇಡೀ ಕುಟುಂಬಕ್ಕೆ ಎಷ್ಟು ಟಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ, ಅಷ್ಟು ಪಡೆಯಲು ನಾನು ಪ್ರಯತ್ನಿಸುತ್ತೇನೆ. ಆದರೆ ಕುಟುಂಬದಿಂದ ಎಷ್ಟು ಜನ ಬರುತ್ತಾರೆ ಅನ್ನೋದು ಖಚಿತವಿಲ್ಲ. ಒಟ್ಟಿನಲ್ಲಿ ಅವರೆಲ್ಲರಿಗೂ ನಾನು ಕೃತಜ್ಞನನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.