Mysore
17
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

Champions Trophy Final | ಚಾಂಪಿಯನ್ಸ್‌ ಟ್ರೋಫಿ ಗೆದ್ದ ಇಂಡಿಯಾ

ದುಬೈ : ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಸರಣಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ಟ್ರೋಫಿಯನ್ನು ಎತ್ತಿಹಿಡಿದಿದೆ.  ಈ ಮೂಲಕ ಟೂರ್ನಿಯುದ್ದಕ್ಕೂ ಅಜೇಯ ಓಟ ಮುಂದುವರಿಸಿದ ಹಿಟ್‌ ಮ್ಯಾನ್‌ ಸಾರಥ್ಯದ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಸೋಲದೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ ಪಡೆ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 251 ರನ್‌ ಗಳಿಸಿತು. ಈ ಮೊತ್ತ ಬೆನ್ನತ್ತಿದ ಭಾರತ ತಂಡ ಒಂದು ಓವರ್‌ ಬಾಕಿ ಇರುವಾಗಲೇ ಜಯ ಸಾಧಿಸಿತು.

ನ್ಯೂಜಿಲೆಂಡ್‌ ಇನ್ನಿಂಗ್ಸ್‌: ಭಾರತ ತಂಡದ ವಿರುದ್ಧ ಫೈನಲ್ಸ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ವಿಲ್‌ ಯಂಗ್‌ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೇ, ರಚಿನ್‌ ರವೀಂದ್ರ 37 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ಡೇರಿಯಲ್‌ ಮಿಚೆಲ್‌ 63(101) ರನ್‌ ಗಳಿಸಿದ್ದೆ ಕಿವೀಸ್‌ ಪರ ಬಂದ ವೈಯಕ್ತಿಕ ಗರಿಷ್ಠ ರನ್‌ ಆಗಿತ್ತು. ಉಳಿದಂತೆ ಬೇರಾರಿಂದಲೂ ಉತ್ತಮ ಜೊತೆಯಾಟ ಸಿಗಲಿಲ್ಲ. ಕೇನ್‌ ವಿಲಿಯಮ್ಸನ್‌ 11, ಟಾಮ್‌ ಲಾಥಮ್‌ 14, ಗ್ಲೇನ್‌ ಫಿಲಿಪ್ಸ್‌ 34, ಮಿಚೆಲ್‌ ಸ್ಯಾಂಟ್ನರ್‌ 8 ರನ್‌ ಗಳಿಸಿದರು.

ಕೊನೆಯಲ್ಲಿ ಅಬ್ಬರಿಸಿದ ಬ್ರೇಸ್‌ ವೆಲ್‌ 40 ಎಸೆತಗಳಲ್ಲಿ 53 ರನ್‌ ಗಳಿಸಿ ತಂಡದ ಮೊತ್ತ ಇನ್ನೂರೈವತ್ತರ ಗಡಿ ದಾಟಲು ಸಹಕರಿಸಿದರು.

ಟೀಂ ಇಂಡಿಯಾ ಪರವಾಗಿ ವರುಣ್‌ ಚಕ್ರವರ್ತಿ, ಕುಲ್ದೀಪ್‌ ಯಾದವ್‌ ತಲಾ ಎರಡು ವಿಕೆಟ್‌, ಜಡೇಜಾ ಹಾಗೂ ಶಮಿ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

ಟೀಂ ಇಂಡಿಯಾ ಇನ್ನಿಂಗ್ಸ್‌: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ನಾಯಕ ರೋಹಿತ್‌ ಶರ್ಮಾ ಮತ್ತು ಶುಭ್‌ಮನ್‌ ಗಿಲ್‌ ಉತ್ತಮ ಆರಂಭ ಒದಗಿಸಿದರು. ಗಿಲ್‌ 31 ರನ್‌ ಗಳಿಸಿ ಔಟಾದರೇ, ನಾಯಕ ರೋಹಿತ್‌ ಶರ್ಮಾ 83 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ ಸಹಿತ 76 ರನ್‌ ಗಳಿಸಿ ಔಟಾದರು.

ಭರವಸೆ ಆಟಗಾರ ವಿರಾಟ್‌ ಕೊಹ್ಲಿ ಕೇವಲ ಒಂದು ರನ್‌ ಗಳಿಸಿ ಬ್ರೇಸ್ವೆಲ್‌ಗೆ ವಿಕೆಟ್‌ ಒಪ್ಪಿಸಿ ಹೊರ ನಡೆದರು.

ಬಳಿಕ ಜೊತೆಯಾದ ಶ್ರೇಯಸ್‌ ಅಯ್ಯರ್‌ ಮತ್ತು ಅಕ್ಷರ್‌ ಪಟೇಲ್‌ ಅರ್ಧಶತಕ ಜೊತೆಯಾಟ ನೀಡಿ ತಂಡದ ಗೆಲುವಿಗೆ ಸಹಕರಿಸಿದರು. ಶ್ರೇಯಸ್‌ 48, ಅಕ್ಷರ್‌ 29 ರನ್‌ ಕಲೆಹಾಕಿ ಔಟಾದರು.

ಕೊನೆಯಲ್ಲಿ ಒಂದಾದ ಕನ್ನಡಿಗ ಕೆ.ಎಲ್‌ ರಾಹುಲ್‌ ಹಾಗೂ ಹಾರ್ದಿಕ್‌ ಪಾಂಡ್ಯ ತಂಡವನ್ನು ಗೆಲುವಿನ ದಡ ಸೇರಿಸಿದರು. ಹಾರ್ದಿಕ್‌ 18 ರನ್‌ ಗಳಿಸಿ ಔಟಾದರೇ, ಕೆ.ಎಲ್‌ ರಾಹುಲ್‌ ಔಟಾಗದೇ 34, ಜಡೇಜಾ ಔಟಾಗದೇ 9 ರನ್‌ ಗಳಿಸಿ ಗೆಲುವಿನ ನಗೆ ಬೀರಿದರು.

ಕಿವೀಸ್‌ ಪರ ಮಿಚೆಲ್‌ ಸ್ಯಾಂಟ್ನರ್‌, ಬ್ರೇಸ್‌ವೆಲ್‌ ತಲಾ ಎರಡು ವಿಕೆಟ್‌, ಜಾಮಿಸನ್‌ ಹಾಗೂ ರಚಿನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Tags:
error: Content is protected !!