Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಚಾಂಪಿಯನ್‌ ಟ್ರೋಫಿ ಕ್ರಿಕೆಟ್‌ : ಪಾಕ್‌ ವಿರುದ್ಧ ಭಾರತಕ್ಕೆ ಜಯ

ದುಬೈ: ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡ ಪಾಕಸ್ತಾನ್ ತಂಡದ ವಿರುದ್ಧ ಜಯ ಸಾಧಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ‌ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೊತ್ತ ಬೆನ್ನತ್ತಿದ ಭಾರತ 42.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ ವಿಜಯದ ಕೇಕೆ ಹಾಕಿತು. ಇದರಿಂದ ಕ್ರೀಡಾಂಗಣದಲ್ಲಿ ನೆರದಿದ್ದ ಲಕ್ಷಾಂತರ ಭಾರತದ ಪರ ಕ್ರಿಕೆಟ್‌ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಅವರ ಶತಕದಾಟ, ಶ್ರೇಯಸ್‌ ಅಯ್ಯರ್‌ ಅವರ ಅರ್ಧಶತಕದ ನೆರವಿನಿಂದ ಪಾಕಿಸ್ತಾನ ಮಣಿಸಿದ ಭಾರತ ತಂಡ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಸೆಮಿಸ್‌ಗೆ ಅರ್ಹತೆ ಪಡೆದುಕೊಂಡಿದೆ.

ಪಾಕ್‌ ಇನ್ನಿಂಗ್ಸ್‌:  ಮೊದಲು ಬ್ಯಾಟ್‌ ಮಾಡಲು ಬಂದ ಪಾಕಿಸ್ತಾನ ಪರವಾಗಿ ಬಾಬರ್‌ ಅಜಂ ಹಾಗೂ ಇಮಾಮ್‌ ಉಲ್‌-ಹಕ್‌ ಇನ್ನಿಂಗ್ಸ್‌ ಆರಂಭಿಸಿದರು. ಆದರೆ ಭಾರತ ತಂಡದ ಬೌಲರ್‌ಗಳ ದಾಳಿಗೆ ತತ್ತರಿಸಿದರು. ಬಾಬರ್‌ ಅಜಂ 23 ರನ್‌ ಗಳಿಸಿ ಹಾರ್ದಿಕ್‌ ಪಾಂಡ್ಯಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಇಮಾಮ್‌ 10 ರನ್‌ ಗಳಿಸಿದ್ದ ವೇಳೆ ಇಲ್ಲದ ರನ್‌ ಕದಿಯಲು ಹೋಗಿ ಅಕ್ಷರ್‌ ಪಟೇಲ್‌ ಗುಡ್‌ ಥ್ರೋಗೆ ವಿಕೆಟ್‌ ಕಳೆದುಕೊಂಡರು.

ನಂತರ ಜೊತೆಯಾದ ಸೌದ್‌ ಶಾಕಿಲ್‌ ಹಾಗೂ ನಾಯಕ ಮೊಹಮ್ಮದ್‌ ರಿಜ್ವಾನ್‌ ಚೇತರಿಕೆಯ ಆಟವಾಡಿದರು. ಶಾಕಿಲ್‌ 76 ಎಸೆತಗಳಲ್ಲಿ 62 ರನ್‌ ಬಾರಿಸಿದರೇ, ಇತ್ತ ರಿಜ್ವಾನ್‌ 77 ಎಸೆತಗಳಲ್ಲಿ 46 ರನ್‌ ಬಾರಿಸಿದರು.

ಉಳಿದಂತೆ ಆಘಾ 19, ತಾಹೀರ್‌ 4, ಶಾಹೀನ್‌ ಶಾ ಅಫ್ರಿದಿ ಶೂನ್ಯ, ನಸೀಮ್‌ ಶಾ 14 ರನ್‌, ಹ್ಯಾರಿಸ್‌ ರೌಫ್‌ 8, ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಕುಶ್ದಿಲ್‌ ಶಾ 38 ರನ್‌ ಗಳಿಸಿದರು. ಅಬ್ರಾರ್‌ ಯಾವುದೇ ಖಾತೆ ತೆರೆಯದೇ ನಾಟ್‌ಔಟ್‌ ಆಗಿ ಉಳಿದರು.

ಟೀಂ ಇಂಡಿಯಾ ಪರವಾಗಿ ಕುಲ್ದೀಪ್‌ ಯಾದವ್‌ ಮೂರು, ಹಾರ್ದಿಕ್‌ ಪಾಂಡ್ಯ ಎರಡು ವಿಕೆಟ್‌, ಅಕ್ಷರ್‌ ಪಟೇಲ್‌, ಜಡೆಜಾ ಹಾಗೂ ಹರ್ಷಿತ್‌ ರಾಣಾ ತಲಾ ಒಂದೊಂದು ವಿಕೆಟ್‌ ಕಬಳಿಸಿ ಮಿಂಚಿದರು.

ಟೀಂ ಇಂಡಿಯಾ ಇನ್ನಿಂಗ್ಸ್‌: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ನಾಯಕ ರೋಹಿತ್‌ ಶರ್ಮಾ 20 ರನ್‌ಗಳಿಗೆ ಇನ್ನಿಂಗ್ಸ್‌ ಮುಗಿಸಿದರು. ಶುಭ್‌ಮನ್‌ ಗಿಲ್‌ 46 ರನ್‌ ಗಳಿಸಿ ಅಬ್ರಾರ್‌ಗೆ ವಿಕೆಟ್‌ ಒಪ್ಪಿಸಿ ಹೊರನಡೆದರು.

ನಂತರ ಒಂದಾದ ವಿರಾಟ್‌ ಕೊಹ್ಲಿ ಮತ್ತು ಶ್ರೇಯಸ್‌ ಅಯ್ಯರ್‌ ಪಾಕ್‌ ಬೌಲರ್‌ಗಳನ್ನು ಕಾಡಿದರು. ಶ್ರೇಯಸ್‌ ಅಯ್ಯರ್‌ 67 ಎಸೆತಗಳಲ್ಲಿ 56 ರನ್‌ ಗಳಿಸಿ ಔಟಾದರು. ಬಳಿಕ ಬಂದ ಹಾರ್ದಿಕ್‌ ಪಾಂಡ್ಯ 8 ರನ್‌ ಗಳಿಸಿ ಬಂದಷ್ಟೆ ವೇಗವಾಗಿ ಹಿಂತಿರುಹಿದರು.

ಕೊನೆಯಲ್ಲಿ ಅಕ್ಷರ್‌ ವಿರಾಟ್‌ ಕೊಹ್ಲಿಗೆ ಸಾಥ್‌ ನೀಡಿದರು. ಅಕ್ಷರ್‌ ಔಟಾಗದೇ 3 ರನ್‌ ಗಳಿಸಿದರೇ, ಕಿಂಗ್‌ ಕೊಹ್ಲಿ ಔಟಾಗದೇ 111 ಎಸೆತಗಳಲ್ಲಿ 7 ಬೌಂಡರಿ ಸಹಿತ 100 ರನ್‌ ಗಳಿಸಿ ತಂಡಕ್ಕೆ ಗೆಲುವು ತಂದಿಟ್ಟರು.

ಪಾಕ್‌ ಪರವಾಗಿ ಶಾಹೀನ್‌ ಅಫ್ರಿದಿ ಎರಡು, ಕಶ್ದಿಲ್‌ ಹಾಗೂ ಅಬ್ರಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ

Tags:
error: Content is protected !!