ಲಾಹೋರ್: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಶಾರ್ಟ್ ಅಫ್ಗಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದು, ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಅಫ್ಗಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಮ್ಯಾಥ್ಯೂ ಶಾರ್ಟ್ 20 ರನ್‌ಗಳಿಸಿ ಔಟಾದರು. ಈ ವೇಳೆ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂದಿತು.
ಈ ಬಗ್ಗೆ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಮಾತನಾಡಿ, ಸ್ಟಾರ್ ಓಪನರ್ ಮ್ಯಾಥ್ಯೂ ಶಾರ್ಟ್ ಮುಂದಿನ ವಾರದ ಸೆಮಿಫೈನಲ್ ಪಂದ್ಯದಲ್ಲಿ ಆಡಲು ಅನುಮಾನ ಎಂದು ತಿಳಿಸಿದ್ದಾರೆ.
ಒಂದು ವೇಳೆ ಮ್ಯಾಥ್ಯೂ ಶಾರ್ಟ್ ಈ ಟೂರ್ನಿಯಿಂದ ಹೊರಗುಳಿದರೆ ಆ ಸ್ಥಾನಕ್ಕೆ ಆಲ್‌ರೌಂಡರ್ ಆರನ್ ಹಾರ್ಡಿ ಅವರು ಆಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾ ಮಂಗಳವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಅಥವಾ ಭಾರತದ ವಿರುದ್ಧ ಹೋರಾಟ ನಡೆಸಲಿದೆ.
ಆಸ್ಟ್ರೇಲಿಯಾ ಪ್ರಸ್ತುತ 4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಒಂದು ವೇಳೆ ಶನಿವಾರ ನಡೆಯುವ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ಗೆದ್ದರೆ ಅಂಕಪಟ್ಟಿಯಲ್ಲಿ ಬದಲಾವಣೆ ಆಗಲಿದೆ.