ದುಬೈ: ಭಾರತ ತಂಡದ ಆಲ್‌ರೌಂಡರ್ ಪ್ರದರ್ಶನದ ಸಹಾಯದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ಪಡೆಯನ್ನು ಬಗ್ಗು ಬಡಿದ ಭಾರತ ತಂಡದ ಈ ಟೂರ್ನಿಯಲ್ಲಿ ತನ್ನ ಅಜೇಯ ಓಟ ಮುಂದುವರಿಸಿದೆ. ಲೀಗ್‌ನಲ್ಲಿ ತಾನಾಡಿದ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಬೀಗಿದೆ.
ಇಲ್ಲಿನ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಕಿವೀಸ್ ಪಡೆಯನ್ನು 44 ರನ್‌ಗಳ ಅಂತರದಿಂದ ಸೋಲಿಸಿದ ಭಾರತ ತಂಡ ಎ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 249 ರನ್ ಕಲೆಹಾಕಿ, ಕಿವೀಸ್‌ಗೆ 250 ರನ್‌ಗಳ ಟಾರ್ಗೆಟ್ ನೀಡಿತು. ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ 45.3 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತು.
ಟೀಂ ಇಂಡಿಯಾ ಇನ್ನಿಂಗ್ಸ್: ಕಿವೀಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರರಿಬ್ಬರು ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದರು. ಗಿಲ್ 2 ರನ್ ಗಳಿಸಿದರೇ, ನಾಯಕ ರೋಹಿತ್ ಶರ್ಮಾ 15 ರನ್ ಗಳಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿ ರನ್ ಗಳಿಸುವಲ್ಲಿ ಪರದಾಡಿದರು. ಕೊಹ್ಲಿ ಕೇವಲ 11 ರನ್ ಗಳಿಗೆ ಸುಸ್ತಾದರು.
ಬಳಿಕ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ನಿಧಾನಗತಿಯಲ್ಲಿ ಇನ್ನಿಂಗ್ಸ್ ಕಟ್ಟಿದರು. ಶ್ರೇಯಸ್ 79, ಅಕ್ಷರ್ 42 ರನ್ ಬಾರಿಸಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ 45 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ಕೆ.ಎಲ್ ರಾಹುಲ್ 23, ಜಡೇಜಾ 16, ಶಮಿ ಔಟಾಗದೇ 5, ಕುಲ್ದೀಪ್ ಯಾದವ್ ಔಟಾಗದೇ 1 ರನ್ ಗಳಿಸಿದರು.
ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಐದು ವಿಕೆಟ್ ಗೊಂಚಲು ಪಡೆದರು. ಜಾಮಿಸನ್, ವಿಲಿಯಂ, ಸ್ಯಾಂಟ್ನರ್ ಹಾಗೂ ರಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
ನ್ಯೂಜಿಲೆಂಡ್ ಇನ್ನಿಂಗ್ಸ್: ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕಿವೀಸ್ ಪಡೆಗೆ ಉತ್ತಮ ಜೊತೆಯಾಟ ಸಿಗಲೇ ಇಲ್ಲ. ಆರಂಭಿಕರಾಗಿ ಕಣಕ್ಕಿಳಿದ ವಿಲ್ ಯಂಗ್ 22, ರಚಿನ್ ರವೀಂದ್ರ 6 ರನ್ ಗಳಿಸಿ ಔಟಾದರು. ಮಾಜಿ ನಾಯಕ ಕೇನ್ ವಿಲಿಯಮ್ಸನ್ 81 ರನ್ ಕಲೆಹಾಕಿದ್ದೇ ತಂಡದ ಪರವಾಗಿ ಗಳಿಸಿದ ವೈಯಕ್ತಿಕ ಗರಿಷ್ಠ ಮೊತ್ತ. ಉಳಿದಂತೆ ಬೇರಾರಿಂದಲೂ ಇನ್ನಿಂಗ್ಸ್ ಕಟ್ಟಿ ಗೆಲ್ಲುವ ಆಟ ಕಂಡು ಬರಲೇ ಇಲ್ಲ.
ಮಿಚೆಲ್ 17, ಲಾಥಮ್ 14, ಪಿಲಿಪ್ 12, ಬ್ರಾಸ್‌ವೆಲ್ 2, ನಾಯಕ ಸ್ಯಾಂಟ್ನರ್ 28, ಮ್ಯಾಟ್ ಹೆನ್ರಿ 2, ವಿಲಿಯಂ 1 ಹಾಗೂ ಜೇಮಿಸನ್ ಔಟಾಗದೆ 9 ರನ್ ಗಳಿಸಿದರು.
ಭಾರತ ತಂಡದ ಪರವಾಗಿ ವರುಣ್ ಚಕ್ರವರ್ತಿ ಐದು ವಿಕೆಟ್, ಕುಲ್ದೀಪ್ ಯಾದವ್ ಎರಡು, ಜಡೇಜಾ, ಅಕ್ಷರ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದರು.
ಪಂದ್ಯಶ್ರೇಷ್ಠ: ವರುಣ್ ಚಕ್ರವರ್ತಿ