Mysore
25
clear sky

Social Media

ಬುಧವಾರ, 28 ಜನವರಿ 2026
Light
Dark

ಚಿಕ್ಕಮಗಳೂರು : ನಾಳೆಯಿಂದ ರ‍್ಯಾಲಿ ಆಫ್‌ ಚಿಕ್ಕಮಗಳೂರು ಶುರು

roc

ರಾಜ್ಯ,ಹೊರರಾಜ್ಯದ 130ಕ್ಕೂ ಹೆಚ್ಚು ಸ್ಪರ್ಧಿ ಭಾಗಿ

ಚಿಕ್ಕಮಗಳೂರು : ಮೇ 31 ಮತ್ತು ಜೂನ್ 1ರಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ʼರ‍್ಯಾಲಿ ಆಫ್ ಚಿಕ್ಕಮಗಳೂರು’ ರಾರಾಜಿಸಲಿದೆ.

ಇದು FMSCI ಭಾರತೀಯ ರಾಷ್ಟ್ರೀಯ ಟೈಮ್ ಸ್ಪೀಡ್ ಡಿಸ್ಟೆನ್ಸ್ ರ‍್ಯಾಲಿ ಚಾಂಪಿಯನ್‌ಶಿಪ್ (4W) 2025ರ ಪ್ರಾರಂಭಿಕ ಸುತ್ತಾಗಿದ್ದು, ಚಿಕ್ಕಮಗಳೂರು ಮೋಟರ್ ಸ್ಪೋರ್ಟ್ಸ್ ಕ್ಲಬ್ (MSCC), ಜೆಕೆ ಟೈರ್ ಮೋಟಾರ್ ಸ್ಪೋರ್ಟ್ಸ್ ಮತ್ತು ವಾಮ್ಸಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್ ಸಹಯೋಗದಲ್ಲಿ ಈ ರ‍್ಯಾಲಿಯನ್ನು ಆಯೋಜಿಸಲಾಗಿದೆ.
ಮೇ 31 ರಂದು ಸಂಜೆ 4:30ಕ್ಕೆ ಚಿಕ್ಕಮಗಳೂರಿನ ಕೆ.ಎಂ. ರಸ್ತೆಯಲ್ಲಿರುವ ಸಿಗ್ನೇಚರ್ ಅಪಾರ್ಟ್‌ಮೆಂಟ್ ಬಳಿ ಮೆರುಗು ಉತ್ಸವ (Ceremonial Start) ನಡೆಯಲಿದ್ದು, ರ‍್ಯಾಲಿಯ ಎರಡನೇ ಹಂತ ಜೂನ್ 1ರಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ 2:00ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ವರ್ಷ ಸ್ಪರ್ಧಿಗಳಿಂದ ದಾಖಲೆಯ 130ಕ್ಕೂ ಹೆಚ್ಚು ಎಂಟ್ರಿಗಳು ಲಭಿಸಿದ್ದು, ಈ ರ‍್ಯಾಲಿ ಇತಿಹಾಸದಲ್ಲೇ ಅತ್ಯಧಿಕವಾಗಿದೆ. ವಿಜೇತರಿಗೆ ಟ್ರೋಫಿಗಳ ಜೊತೆಗೆ ₹3.5 ಲಕ್ಷಕ್ಕೂ ಹೆಚ್ಚು ನಗದು ಬಹುಮಾನ ಮತ್ತು ‘ಸ್ಟಾರ್ ಆಫ್ ಚಿಕ್ಕಮಗಳೂರು’, ‘ಸ್ಟಾರ್ ಆಫ್ ಕರ್ನಾಟಕ’, ‘ಕಾಫಿ ಟ್ರೈಲ್ ಪ್ರೋ ಸ್ಟಾಕ್/ಓಪನ್’ ಮೊದಲಾದ ಗೌರವ ಪ್ರಶಸ್ತಿಗಳು ಲಭಿಸಲಿವೆ.
ದೆಹಲಿಯಿಂದ ಕಾಶ್ಮೀರದವರೆಗೆ, ಕೋಲ್ಕತದಿಂದ ಚೆನ್ನೈ, ಕೋಯಂಬತ್ತೂರು, ಮುಂಬೈ, ಬೆಂಗಳೂರು, ಜಂಷೆಡ್ಪುರ ಮತ್ತು ಇತರ ನಗರಗಳಿಂದ ರಾಷ್ಟ್ರೀಯ ಮಟ್ಟದ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ವಿಶೇಷವಾಗಿ ದೀಪಕ್/ಪ್ರಕಾಶ್ ಎಂ, ನಾಗ/ಸಂತೋಷ್, ಕ್ಷಮತಾ/ಅನ್ಮೋಲ್, ಶಫಾದ್/ವೇಲುಮುರುಗನ್ ಮತ್ತು ಗೀತಿಕಾ ಪಂತ್/ನೀನಾ ಜೈನ್ ಅವರು ಗಮನ ಸೆಳೆಯಲಿದ್ದಾರೆ. ಸ್ಥಳೀಯರ ಪರವಾಗಿ, ಅಭಿನಾಶ್/ಸಮೃದ್ಧ್ ಪೈ, ಮಂಜು ಜೈನ್, ಚಿರಂತ್ ಗೌಡ, ಶ್ರೀಕಾಂತ್ ಗೌಡ (ಚಿಕ್ಕಮಗಳೂರು ಮತ್ತು ಕಡೂರು) ಭಾಗವಹಿಸುತ್ತಿದ್ದಾರೆ.

ರ‍್ಯಾಲಿಯು ಎಂಟು ವಿಭಿನ್ನ ವಿಭಾಗಗಳಲ್ಲಿ ನಡೆಯಲಿದ್ದು, ಅದರಲ್ಲಿ INTSDRC ಎಕ್ಸ್ಪರ್ಟ್, ಪ್ರೋ ಸ್ಟಾಕ್, ಕಾರ್ಪೊರೇಟ್, ದಂಪತಿ (Couple), ಮಹಿಳಾ ವಿಭಾಗಗಳ ಜೊತೆಗೆ ಸೂಪರ್‌ಕಾರ್, ಚಿಕ್ಕಮಗಳೂರು ಕ್ಲಾಸ್ ಮತ್ತು ಕರ್ನಾಟಕ ಸೂಪರ್ ಕಾರ್ ಕ್ಲಾಸ್ ಇವೆ. ಈ ವಿಭಾಗಗಳಲ್ಲಿ ಸ್ಪರ್ಧೆಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.

FMSCI ಅನುಮೋದಿತ ಈ ರ‍್ಯಾಲಿ, INTSDRC 2025 ಚಾಂಪಿಯನ್‌ಶಿಪ್ ಫೈನಲ್‌ಗೆ ಮಾರ್ಗದರ್ಶನ ನೀಡುವ ಹಲವಾರು ಅರ್ಹತಾ ಸುತ್ತುಗಳಲ್ಲಿ ಮೊದಲನೆಯದು. ಪ್ರತಿ ವಿಭಾಗದ ಮೊದಲ ಮೂವರು ಸ್ಪರ್ಧಿಗಳು, ಕನಿಷ್ಠ ಎರಡು ಅರ್ಹತಾ ಸುತ್ತುಗಳಲ್ಲಿ ಭಾಗವಹಿಸಿದ್ದರೆ ಮಾತ್ರ ಫೈನಲ್‌ಗೆ ಆಯ್ಕೆಯಾಗುತ್ತಾರೆ.

Tags:
error: Content is protected !!