ಲಾಹೋರ್ : ಪಲ್ಲೆಕೆಲೆಯಲ್ಲಿ ಶನಿವಾರ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಏಶ್ಯಕಪ್ ಪಂದ್ಯವು ಮಳೆಯಿಂದಗಿ ರದ್ದಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಮಾಜಿ ಅಧ್ಯಕ್ಷ ನಜಮ್ ಸೇಥಿ ಏಶ್ಯಕಪ್ನ ವೇಳಾಪಟ್ಟಿಯ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಏಶ್ಯನ್ ಕ್ರಿಕೆಟ್ ಕೌನ್ಸಿಲ್ನ ನಿರ್ಧಾರವನ್ನು ಟೀಕಿಸಿದ್ದಾರೆ.
ಶ್ರೀಲಂಕಾವನ್ನು ಸಹ ಆತಿಥ್ಯ ದೇಶವನ್ನಾಗಿ ಮಾಡುವ ಉದ್ದೇಶದಿಂದಲೇ ಯುಎಇನಲ್ಲಿ ಏಶ್ಯಕಪ್ ಟೂರ್ನಿಯನ್ನು ಆಯೋಜಿಸಬೇಕೆಂಬ ತನ್ನ ಸಲಹೆಯನ್ನು ಏಶ್ಯನ್ ಕ್ರಿಕೆಟ್ ಕೌನ್ಸಿಲ್ ತಿರಸ್ಕರಿಸಿತ್ತು ಎಂದು ಆರೋಪಿಸಿದರು.
ಶನಿವಾರ ಮಳೆಯಿಂದಾಗಿ ಕ್ರಿಕೆಟ್ನಲ್ಲಿ ಅತ್ಯುತ್ತಮ ಸ್ಪರ್ಧೆಯೊಂದನ್ನು ಕಳೆದುಕೊಳ್ಳುವಂತಾಯಿತು. ಪಿಸಿಬಿ ಅಧ್ಯಕ್ಷನಾಗಿದ್ದಾಗ ಯುಎಇನಲ್ಲಿ ಏಶ್ಯಕಪ್ ಆಡಬೇಕೆಂದು ಎಸಿಸಿಗೆ ಮನವಿ ಮಾಡಿದ್ದೆ. ಆದರೆ ಶ್ರೀಲಂಕಾಕ್ಕೆ ಅನುಕೂಲ ಮಾಡಿಕೊಡಲು ಕಳಪೆ ನಿರ್ಧಾರ ತಳೆಯಲಾಗಿದೆ ಎಂದರು.
ದುಬೈನಲ್ಲಿ ಟೂರ್ನಮೆಂಟ್ ಆಯೋಜಿಸದಿರಲು ಎಸಿಸಿ ನೀಡಿರುವ ಕಾರಣವನ್ನು ಟೀಕಿಸಿರುವ ಸೇಥಿ, ದುಬೈನಲ್ಲಿ ವಿಪರೀತ ಉಷ್ಣಾಂಶವಿದೆ ಎಂದು ಕಾರಣ ನೀಡಲಾಯಿತು. ಆದರೆ, 2022ರ ಸೆಪ್ಟಂಬರ್ನಲ್ಲಿ ಏಶ್ಯಕಪ್ ಆಡುವಾಗ ಹಾಗೂ 2014ರ ಎಪ್ರಿಲ್ನಲ್ಲಿ ಐಪಿಎಲ್ ಆಡುವಾಗ ದುಬೈನಲ್ಲಿ ಉಷ್ಣಾಂಶವಿರಲಿಲ್ಲವೇ? ಕ್ರೀಡೆಯ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಇದನ್ನು ಕ್ಷಮಿಸಲಾಗದು ಎಂದು ಹೇಳಿದರು.