ಅಡಿಲೇಡ್: ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ (ಹಗಲು-ರಾತ್ರಿ) ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 180 ರನ್‌ಗಳಿಗೆ ಆಲೌಟ್ ಆಗಿದೆ. ಮಿಚೆಲ್ ಸ್ಟಾರ್ಕ್ 6 ವಿಕೆಟ್ ಉರುಳಿಸುವ ಮೂಲಕ ಭಾರತದ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದಾರೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಪರ್ತ್ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕ ಜೋಡಿ ಈ ಬಾರಿ ವಿಫಲವಾಯಿತು. ಯಶಸ್ವಿ ಜೈಸ್ವಾಲ್ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ ಹಾಗೆ ಇಲ್ಲೂ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಮೊದಲ ಎಸೆತದಲ್ಲೇ ಔಟಾದರು.
ನಂತರ ಶುಭಮನ್ ಗಿಲ್ 31 ಹಾಗೂ ಕೆಎಲ್ ರಾಹುಲ್ 37 ರನ್‌ಗಳ ಕಾಣಿಕೆ ಜೊತೆಗೆ 69 ರನ್‌ಗಳ ಜೊತೆಯಾಟವನ್ನು ಆಡಿದರು. ಕೆಎಲ್ ರಾಹುಲ್ ವಿಕೆಟ್ ಪತನದ ಬಳಿಕ ನಂತರದ ಬ್ಯಾಟರ್‌ಗಳ ಪೆವಿಲಿಯನ್ ಪರೇಡ್ ಶುರುವಾಯಿತು.
ವಿರಾಟ್ ಕೊಹ್ಲಿ (7) ಕ್ರೀಸ್‌ಗೆ ಬಂದ ಕೂಡಲೇ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಸ್ಟೀವ್ ಸ್ಮಿತ್‌ಗೆ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ರೋಹಿತ್ (3) ಕೂಡ ಬಂದ ದಾರಿಗೆ ಶುಂಕವಿಲ್ಲ ಎಂಬಂತೆ ಕೊಹ್ಲಿ ಹಾದಿ ಹಿಡಿದರು. ನಂತರ ವಿಕೆಟ್ ಕೀಪರ್ ರಿಷಭ್ ಪಂತ್ ಸ್ವಲ್ಪ ಭರವಸೆ ಮೂಡಿಸಿದರು ಆದರೆ ಕಮಿನ್ಸ್ ಬಾಲ್‌ನಲ್ಲಿ 21 ರನ್‌ಗಳಿಸಿ ಔಟಾದರು.
ಭಾರತದ ಬ್ಯಾಟರ್‌ಗಳ ವಿಫಲದಿಂದ 6 ವಿಕೆಟ್‌ಗಳ ನಷ್ಟಕ್ಕೆ 109 ರನ್‌ಗಳಿಸಿ ಸಂಕಷ್ಟದಲ್ಲಿದ್ದ ತಂಡಕ್ಕೆ 7ನೇ ಕ್ರಮಾಂಕದಲ್ಲಿ ಆಡಲು ಬಂದ ಆಲ್‌ರೌಂಡರ್ ನಿತೀಶ್ ರೆಡ್ಡಿ ಆಸರೆಯಾದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 42 ರನ್‌ಗಳ ಸ್ಪೋಟಕ ಬ್ಯಾಟಿಂಗ್ ಮಾಡಿದರು. ಇದರಿಂದ ಇಂಡಿಯಾ ಹೀನಾಯ ಮೊತ್ತಕ್ಕೆ ಆಲ್‌ಔಟ್ ಆಗುವುದರಿಂದ ಪಾರು ಮಾಡಿದರು.
ಆಸ್ಟ್ರೇಲಿಯಾದ ಪರ ಅದ್ಭುತ ಬೌಲಿಂಗ್ ಮಾಡಿದ ಮಿಚೆಲ್ ಸ್ಟಾರ್ಕ್ ಕೇವಲ 48 ರನ್ ನೀಡಿ 6 ವಿಕೆಟ್ ಪಡೆದರು. ಉಳಿದಂತೆ ಪ್ಯಾಟ್ ಕಮಿನ್ಸ್ ಹಾಗೂ ಸ್ಕಾಟ್ ಬೋಲ್ಯಾಂಡ್ ತಲಾ 2 ವಿಕೆಟ್ ಕಬಳಿಸಿದರು.