ಮೆಲ್ಬೋರ್ನ್: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ 4ನೇ ಟೆಸ್ಟ್ ಪಂದ್ಯವು ನಾಳೆ (ಡಿ.26) ಮೆಲ್ಬೋರ್ನ್‌ನ ಎಂಸಿಜಿ ಮೈದಾನದಲ್ಲಿ ಆರಂಭವಾಗಲಿದೆ.
ಈ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡ ತನ್ನ ಪ್ಲೇಯಿಂಗ್ 11 ಪ್ರಕಟಿಸಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆ ಮಾಡಿದೆ. ಕಳೆದ ಮೂರು ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ ನಾಥನ್ ಮೆಕ್‌ಸ್ವೀನಿ ಅವರ ಬದಲಿಗೆ ಯುವ ದಾಂಡಿಗ ಸ್ಯಾಮ್ ಕೊನ್‌ಸ್ಟಾಸ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ಗಾಯದ ಕಾರಣದಿಂದಾಗಿ ಹೊರಗುಳಿದಿರುವ ಜೋಶ್ ಹ್ಯಾಝಲ್‌ವುಡ್ ಸ್ಥಾನದಲ್ಲಿ ಸ್ಕಾಟ್ ಬೋಲ್ಯಾಂಡ್ ಕಣಕ್ಕಿಳಿಯಲಿದ್ದಾರೆ.
ಈ ಪಂದ್ಯದಲ್ಲಿ ಆರಂಭಿಕರಾಗಿ ಉಸ್ಮಾನ್ ಖ್ವಾಜಾ ಜೊತೆ ಹೊಸದಾಗಿ ಸೇರ್ಪಡೆಯಾಗಿರುವ ಸ್ಯಾಮ್ ಕೊನ್‌ಸ್ಟಾಸ್ ಕಣಕ್ಕಿಳಿಯಲ್ಲಿದ್ದು, ಮೂರನೇ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೆನ್ ಆಡಲಿದ್ದಾರೆ. ಉಳಿದಂತೆ ಇಂದಿನ ಪಂದ್ಯಗಳಲ್ಲಿ ಆಡಿದ ಸ್ಥಾನದಲ್ಲೇ ಆಸ್ಟ್ರೇಲಿಯಾದ ಉಳಿದ ಬ್ಯಾಟರ್‌ಗಳು ಬ್ಯಾಟ್ ಬೀಸಲಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಸ್ಕಾಟ್ ಬೋಲ್ಯಾಂಡ್ ಪುನಃ ಸ್ಥಾನ ಪಡೆದಿದ್ದು, ಜೊತೆಯಲ್ಲಿ ವೇಗಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಸ್ಪಿನ್ನರ್ ನಾಥನ್ ಲಿಯಾನ್ ತಂಡದಲ್ಲಿದ್ದಾರೆ.
ಮೆಲ್ಬೋರ್ನ್ ಟೆಸ್ಟ್ ಪಂದ್ಯವು ಎರಡು ತಂಡಗಳಿಗೂ ಮುಖ್ಯವಾಗಿದೆ. ಈ ಮ್ಯಾಚ್‌ನಲ್ಲಿ ಗೆದ್ದ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಾದಿ ಸುಗಮವಾಗಲಿದೆ.
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಉಸ್ಮಾನ್ ಖ್ವಾಜಾ, ಸ್ಯಾಮ್ ಕೊನ್‌ಸ್ಟಾಸ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ನಾಥನ್ ಲಿಯಾನ್.