ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಶುಮಾನ್ ಗಾಯಕ್ವಾಡ್ ಅವರು ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಒಂದು ಕೋಟಿ ಆರ್ಥಿಕ ನೆರವು ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ.
ತೀವ್ರ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಂಶುಮಾನ್ ಗಾಯಕ್ವಾಡ್ ಅವರು ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 71 ವರ್ಷದ ಅಂಶುಮಾನ್ 1975-1987ರ ಅವಧಿಯಲ್ಲಿ ಟೀಂ ಇಂಡಿಯಾ ಪರವಾಗಿ ಆಡಿದ್ದರು. 40 ಟೆಸ್ಟ್ ಹಾಗೂ 15 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರವಾಗಿ ಕಣಕ್ಕಿಳಿದಿದ್ದರು ಅಂಶುಮಾನ್.
ಈ ಅವಧಿಯಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದ ಕಪಿಲ್ ದೇವ್ ಅಂಶುಮಾನ್ ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ಬಿಸಿಸಿಐಗೆ ವಿವರಿಸಿದ್ದರು. ನನ್ನ ಸಹಪಾಠಿ ಈ ರೀತಿಯಲ್ಲಿ ಇರುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಬಿಸಿಸಿಐ ಅವರಿಗೆ ಅಗತ್ಯ ನೆರವನ್ನು ನೀಡಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಬಿಸಿಸಿಐ ಗೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ ಬಿಸಿಸಿಐ ಈ ಬಿಕ್ಕಟ್ಟಿನ ಸಮಯದಲ್ಲಿ ಅಂಶುಮಾನ್ ಕುಟುಂಬದೊಂದಿಗೆ ಬಿಸಿಸಿಐ ಇರಲಿದೆ. ಗಾಯಕ್ವಾಡ್ ಅವರ ಕುಟುಂಬದ ಪರಿಸ್ಥಿತಿ ಆಧರಿಸಿ ಬಿಸಿಸಿಐ ಆರ್ಥಿಕ ನರೆವು ನೀಡಲಿದೆ. ತಕ್ಷಣವೇ ಅವರಿಗೆ ಚಿಕಿತ್ಸೆಗಾಗಿ ಒಂದು ಕೋಟಿ ಮಂಜೂರು ಮಾಡಲಾಗುವುದು ಎಂದು ಬಿಸಿಸಿಐ ಎಪೆಕ್ಸ್ ತಿಳಿಸಿದೆ.