ಮೈಸೂರು: ಇತ್ತೀಚೆಗಷ್ಟೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ ಗೆದ್ದಿರುವ ಭಾರತ ತಂಡಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೂತನ ಕೋಚ್ ಎಂದು ಅಧಿಕೃತವಾಗಿ ಘೋಷಿಸಿದೆ.
ಬಿಸಿಸಿಐ ಅಧ್ಯಕ್ಷ ಜಯ್ ಶಾ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಗೌತಮ್ ಗಂಭಿರ್ ಜತೆಗಿನ ತಮ್ಮ ಫೋಟೊವನ್ನು ಹಂಚಿಕೊಂಡಿದ್ದು, ಈ ಬೃಹತ್ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಸ್ಥಾನವನ್ನು ಮುಂದಿನ ದಿನಗಳಲ್ಲಿ ಗೌತಮ್ ಗಂಭೀರ್ ತುಂಬಲು ಸಜ್ಜಾಗಿದ್ದಾರೆ.
ಇನ್ನು ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಹಾಗೂ ಡಬ್ಲ್ಯು ರಾಮನ್ ಅವರನ್ನು ಸಂದರ್ಶಿಸಿದ್ದ ಬಿಸಿಸಿಐ ಅಂತಿಮವಾಗಿ ಗಂಭೀರ್ ಅವರ ಹೆಗಲಿಗೆ ಜವಾಬ್ದಾರಿಯನ್ನು ಹಾಕಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೆಕೆಆರ್ ತಂಡವನ್ನು ಕೋಚ್ ಆಗಿ ಮುನ್ನಡೆಸಿ ಕಪ್ ಗೆಲ್ಲಿಸಿರುವ ಹೆಗ್ಗಳಿಗೆ ಗಂಭೀರ್ ಪಾಲಿಗಿದೆ.