Mysore
23
light intensity drizzle

Social Media

ಗುರುವಾರ, 26 ಡಿಸೆಂಬರ್ 2024
Light
Dark

AUS vs IND Test: ಭಾರತಕ್ಕೆ ಐತಿಹಾಸಿಕ ದಾಖಲೆಯ ಜಯ

ಪರ್ತ್:‌ ಬಾರ್ಡರ್-‌ ಗವಸ್ಕಾರ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 295 ರನ್‌ಗಳ ಐತಿಹಾಸಿಕ ಜಯ ದಾಖಲಿಸಿದೆ. ಇದು ಟೀಂ ಇಂಡಿಯಾಗೆ ಏಷ್ಯಾದ ಹೊರಗೆ ದೊರೆತ ಭಾರಿ ರನ್‌ಗಳ ಅಂತರದ ಗೆಲುವಾಗಿದೆ. ಉತ್ತಮ ಬೌಲಿಂಗ್‌ ಪ್ರದರ್ಶನದ ಜೊತೆಗೆ ಸಾಂಘಿಕ ಹೋರಾಟವು ಗೆಲುವಿಗೆ ಕಾರಣವಾಗಿದೆ.

ಶುಕ್ರವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಂ ಇಂಡಿಯಾದ ಕ್ಯಾಪ್ಟನ್‌ ಬುಮ್ರಾ ಬ್ಯಾಟಿಂಗ್‌ ಆಯ್ದುಕೊಂಡರು. ನಾಯಕನ ನಂಬಿಕೆ ಉಳಿಸುವಲ್ಲಿ ಬ್ಯಾಟರ್‌ಗಳು ಸೋತರು. ಆಸ್ಟ್ರೇಲಿಯಾದ ಬಿಗಿ ಬೌಲಿಂಗ್‌ ದಾಳಿಗೆ ಇಂಡಿಯಾ 150 ರನ್‌ಗಳಿಗೆ ಆಲೌಟ್‌ ಆಯಿತು. ಆಸ್ಟ್ರೇಲಿಯಾ ಪರ ಹ್ಯಾಜಲ್‌ವುಡ್‌ 4 ವಿಕೆಟ್‌ ಪಡೆದು ಮಿಂಚಿದರು.

ನಂತರ ಪ್ರಥಮ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಇಂಡಿಯಾದ ವೇಗದ ದಾಳಿಗೆ ತತ್ತರಿಸಿ 104‌ ರನ್‌ಗಳಿಗೆ ಆಲೌಟ್ ಆಯಿತು. ಬುಮ್ರಾ 30ರನ್‌ ನೀಡಿ 5 ವಿಕೆಟ್‌ ಪಡೆಯುವ ಮೂಲಕ ಯಶಸ್ವಿ ಬೌಲರ್‌ ಎನಿಸಿದರು.

46 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಇಂಡಿಯಾಗೆ ಬ್ಯಾಟರ್‌ಗಳು ಉತ್ತಮ ಆರಂಭ ನೀಡಿದರು. ಕೆಎಲ್‌ ರಾಹುಲ್‌ ಹಾಗೂ ಜೈಸ್ವಾಲ್‌ 201 ರನ್‌ಗಳ ಜೊತೆಯಾಟ ಆಡುವ ಮೂಲಕ ಇಂಡಿಯಾಗೆ ಭದ್ರ ಬುನಾದಿ ಹಾಕಿದರು.

ಕೆಎಲ್‌ ರಾಹುಲ್‌ 77(176) ರನ್‌ಗಳಿಗೆ ತಮ್ಮ ಇನ್ನಿಂಗ್ಸ್‌ ಮುಗಿಸಿದರು. ನಂತರ ಜೈಸ್ವಾಲ್‌ ಜೊತೆಗೂಡಿದ ವಿರಾಟ್‌ ಅಬ್ಬರದ ಬ್ಯಾಟಿಂಗ್‌ನಿಂದ ದಾಖಲೆಯ ಶತಕ 100(143) ಪೂರೈಸಿ ಅಜೇಯರಾಗಿ ಉಳಿದರೆ, ಜೈಸ್ವಾಲ್‌ 161(297) ರನ್‌ಗೆ ಔಟಾದರು.

ತಂಡದ ಮೊತ್ತ 6 ವಿಕೆಟ್‌ಗೆ 487ರನ್‌ ಗಳಿಸಿದಾಗ ಟೀಂ ಇಂಡಿಯಾದ ನಾಯಕ ಡಿಕ್ಲೇರ್ ಮಾಡಿಕೊಂಡು 534 ರನ್‌ಗಳ ಬೃಹತ್‌ ಮೊತ್ತದ ಗುರಿ ಎದುರಾಳಿಗೆ ನೀಡಿದರು. ಮೂರನೇ ದಿನದಾಂತ್ಯದಲ್ಲಿ ಬ್ಯಾಟಿಂಗ್‌ ಆರಂಭಿಸಿದ ಅತಿಥೇಯ ತಂಡವು 12 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.

ಒತ್ತಡದಲ್ಲೇ ನಾಲ್ಕನೇ ದಿನ ಆರಂಭಿಸಿದ ಆಸ್ಟ್ರೇಲಿಯಾ ತಂಡವು 238 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಭಾರತದ ಎದುರು 295 ರನ್‌ಗಳ ಸೋಲೊಪ್ಪಿಕೊಂಡಿತು.

ಮಧ್ಯಮ ಕ್ರಮಾಂಕದಲ್ಲಿ ಟ್ರಾವಿಸ್‌ ಹೆಡ್‌ (89 ರನ್)‌, ಮಿಚೆಲ್‌ ಮಾರ್ಷ್(‌47ರನ್)‌, ಮತ್ತು ಅಲೆಕ್ಸ್‌ ಕ್ಯಾರಿ (36ರನ್)‌ ಹೋರಾಟ ನಡೆಸಿದರು ಸೋಲು ತಪ್ಪಿಸಲು ಆಗಲಿಲ್ಲ.

ಮತ್ತೆ ಮಿಂಚಿದ ಬುಮ್ರಾ ಹಾಗೂ ಸಿರಾಜ್‌ 3 ವಿಕೆಟ್‌ ಕಬಳಿಸಿದರೆ, ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಹಾಗೂ ಹರ್ಷಿತ್‌ ರಾಣಾ ನಿತೀಶ್‌ ರೆಡ್ಡಿ ತಲಾ ಒಂದು ವಿಕೆಟ್‌ ಪಡೆದರು.

ನಾಯಕ ಜಸ್ಪ್ರೀತ್‌ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Tags: