ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತದ ಅದ್ಭುತ ಪ್ರದರ್ಶನ ಶನಿವಾರವೂ ಮುಂದುವರಿದಿದೆ.
ಇಂದು ನಡೆದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಫೈನಲ್‌ನಲ್ಲಿ ಭಾರತದ ಜೋಡಿಯಾದ ಸರಬ್ಜೋತ್ ಸಿಂಗ್ ಮತ್ತು ದಿವ್ಯಾ ಬೆಳ್ಳಿ ಪದಕ ಗೆದ್ದಿದ್ದಾರೆ.
ಚೀನಾದ ಬೋವೆನ್ ಜಾಂಗ್ ಮತ್ತು ರಾಂಕ್ಸಿನ್ ಜಿಯಾಂಗ್ ಅವರು ಸ್ಪರ್ಧೆಯ ಆರಂಭಿಕ ಹಂತಗಳಲ್ಲಿ ಭಾರತಕ್ಕಿಂತ ಹಿಂದುಳಿದಿದ್ದರೂ ಕೂಡ ನಂತರ ಗಮನಾರ್ಹ ಕಮ್‌ಬ್ಯಾಕ್ ಮಾಡಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್‌ಗಳ ನೀರಸ ಪ್ರದರ್ಶನದ ಬಳಿಕ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಶೂಟಿಂಗ್ ತಂಡ ಅದ್ಭುತವಾದ ಪುನರಾಗಮನ ಮಾಡಿದೆ.
ಶೂಟಿಂಗ್ ವಿಭಾಗದಲ್ಲಿ ಭಾರತ ಆರು ಚಿನ್ನ, ಎಂಟು ಬೆಳ್ಳಿ ಮತ್ತು ಐದು ಕಂಚು ಸೇರಿದಂತೆ ಒಟ್ಟು 19 ಪದಕಗಳನ್ನು ಪಡೆದುಕೊಂಡಿದೆ. ಇದು ಇಲ್ಲಿಯವರೆಗಿನ ಅತ್ಯುತ್ತಮ ಪ್ರದರ್ಶನ ಎನಿಸಿಕೊಂಡಿದೆ. 2006ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಶೂಟಿಂಗ್ ವಿಭಾಗದ ಸಾಧನೆಯನ್ನು ಇದು ಹಿಂದಿಕ್ಕಿದೆ.