Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಏಷ್ಯನ್ ಗೇಮ್ಸ್: ಬಾಕ್ಸರ್ ಲೊವ್ಲಿನಾಗೆ ಬೆಳ್ಳಿ, ಕಂಚಿಗೆ ತೃಪ್ತಿಪಟ್ಟ ಪರ್ವೀನ್ ಹೂಡಾ

ಹ್ಯಾಂಗ್‌ಝೌ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಟೋಕಿಯೊ ಒಲಿಂಪಿಕ್‌ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್‌ ಅವರು ಬುಧವಾರ ಬೆಳ್ಳಿ ಪದಕ ಗೆದ್ದಿದಾರೆ.

ಇಂದು ನಡೆದ ಬಾಕ್ಸಿಂಗ್ ಸ್ಪರ್ಧೆಯ ಮಹಿಳೆಯರ 75 ಕೆಜಿ ವಿಭಾಗದ ಫೈನಲ್ ನಲ್ಲಿ ಲೊವ್ಲಿನಾ ಬೊರ್ಗೊಹೈನ್‌ ಅವರು, ಹಾಲಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಲಿ ಕಿಯಾನ್ ವಿರುದ್ಧ ಸೋಲು ಅನುಭವಿಸುವುದರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟರು.

ಇನ್ನು ಬಾಕ್ಸಿಂಗ್ ಸ್ಪರ್ಧೆಯ ಮಹಿಳೆಯರ 57 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಪರ್ವೀನ್ ಹೂಡಾ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ಚೈನೀಸ್ ತೈಪೆಯ ಲಿನ್ ಯು ಟಿಂಗ್ ವಿರುದ್ಧ ಸೋಲು ಅನುಭವಿಸುವುದರೊಂದಿಗೆ ಕಂಚಿಗೆ ತೃಪ್ತಿಪಟ್ಟರು.

ಈ ಮೂಲಕ ಭಾರತದ ಬಾಕ್ಸರ್‌ಗಳು ಒಂದು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಐದು ಪದಕಗಳನ್ನು ಗೆದ್ದಿದ್ದಾರೆ. ಕಳೆದ ಆವೃತ್ತಿಯಲ್ಲಿ ಭಾರತ ಒಂದು ಚಿನ್ನ ಮತ್ತು ಒಂದು ಕಂಚು ಗೆದ್ದಿತ್ತು.

“ನಾನು ಅತ್ಯುತ್ತಮ ಪ್ರದರ್ಶನ ನೀಡಿದ್ದೇನೆ. ಆದರೂ ಚಿನ್ನವನ್ನು ತರಲು ಸಾಧ್ಯವಾಗಲಿಲ್ಲ. ನನ್ನ ಆಟದಿಂದ ನನಗೆ ಸಂತೋಷವಾಗಿದೆ. ನಾನು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲು ಪ್ರಯತ್ನಿಸುತ್ತೇನೆ” ಎಂದು ಬೋರ್ಗೊಹೈನ್ ಅವರು ಪಂದ್ಯದ ನಂತರ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ